ಮಂಡ್ಯ: ಪಾದದ ಮೂಳೆ ಮುರಿತದಿಂದ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಲ್ಲೂರು ಗ್ರಾಮದ 7 ವರ್ಷದ ಸಾನ್ವಿ ಎಂಬುವವಲೇ ಮೃತ ಬಾಲಕಿಯಾಗಿದ್ದಾಳೆ.
ಟೈಲ್ಸ್ ಬಿದ್ದು ಸಾನ್ವಿಯ ಪಾದದ ಮೂಳೆ ಮುರಿದ ಪರಿಣಾಮ ತಂದೆ ನಿಂಗರಾಜು ಅವರು ಕಳೆದ ಮೇ.29ರಂದು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಎಲ್ಲಾ ಪರೀಕ್ಷೆಗಳನ್ನು ನಡೆಸಿದ ನಂತರ ಗುರುವಾರ ರಾತ್ರಿಯೇ ಸಾನ್ವಿಗೆ ಶಸ್ತ್ರಚಿಕಿತ್ಸೆ ಮಾಡಿ, ಅಂದಿನ ರಾತ್ರಿಯೇ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಶುಕ್ರವಾರ ಬೆಳಿಗ್ಗೆ ಬಾಲಕಿ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಬಳಿಕ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಶನಿವಾರ ಬೆಳಿಗ್ಗೆ ಡ್ರಿಪ್ ಮೂಲಕ ಔಷಧಿ ಕೂಡ ನೀಡಲಾಗಿತ್ತು. ಔಷಧಿ ನೀಡುತ್ತಿದ್ದಂತೆ ಸಾನ್ವಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಳು. ಆದರೆ ಶನಿವಾರ ರಾತ್ರಿ 10:30ರ ಸಮಯದಲ್ಲಿ ಮಗು ಸಾವಿನ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನು ಪೋಷಕರಿಗೆ ಮಾಹಿತಿ ನೀಡುವ ಮುನ್ನವೇ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿ ಕರೆಸಿಕೊಂಡಿದ್ದ ಆರೋಪ ಕೇಳಿಬಂದಿದ್ದು, ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದೇ ಮಗು ಸಾವಿಗೆ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಮಗು ಸಾವಿನ ಬಗ್ಗೆ ಪ್ರಶ್ನಿಸಿದ ಕುಟುಂಬಸ್ಥರಿಗೆ ವೈದ್ಯರು ಬೇಜಾವಾಬ್ದಾರಿ ಉತ್ತರ ನೀಡಿದ್ದು, ಅಂಗಾಂಗ ವೈಫಲ್ಯದಿಂದ ಮಗು ಸಾವನ್ನಪ್ಪಿದೆ. ಬೇಕಾದರೆ ತನಿಖೆ ಮಾಡಿಸಿಕೊಳ್ಳಿ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಪೋಷಕರು, ಬೇರೆ ವೈದ್ಯರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸೂಕ್ತ ತನಿಖೆಗೆ ಒತ್ತಾಯಿಸಿದ್ದು, ಮಗು ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.





