ಮಂಡ್ಯ: ರಾಷ್ಟ್ರದ ಜಿಡಿಪಿಯಲ್ಲಿ ಕೃಷಿ ಪಾಲು ಶೇ.೨೦ ರಷ್ಟು ಇದ್ದು, ಶೇ.೬೦ ರಷ್ಟು ಜನರು ಕೃಷಿ ಅವಲಂಭಿಸಿದ್ದಾರೆ. ಆದ್ದರಿಂದ ರಾಷ್ರ್ಟದ ಅಭಿವೃದ್ಧಿಗೆ ಕೃಷಿ ಜತೆಗೆ ಬೃಹತ್ ಕೈಗಾರಿಕಾ ಬೆಳವಣಿಗೆ ಆಗಬೇಕು ಎಂದು ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಎಚ್.ಎಸ್ ಜಯಕುಮಾರ್ ಅವರು ಪ್ರತಿಪಾದಿಸಿದ್ದಾರೆ.
ಅಖಿಲ ಭಾರತ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಿಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್ಞಿ ತ್ರೀವೇಣಿ ವೇದಿಕೆಯಲ್ಲಿ ಪ್ರತಿಭಾ ಪಲಾಯನ: ಪರಿಹಾರಗಳ ಕುರಿತು ಶನಿವಾರ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ೭೦ ಲಕ್ಷ ಉದ್ಯೋಗ ಖಾಲಿ ಇದೆ. ಇದರಿಂದ ವಿವಿಧ ದೇಶಗಳಿಗೆ ಯುವಕರು ವಲಸೆ ಹೋಗುತ್ತಿದ್ದಾರೆ. ಆದ್ದರಿಂದ
ರಾಷ್ಟ್ರದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆ ಮತ್ತಷ್ಟು ಹೆಚ್ಚಾಗಬೇಕು ಎಂದು ಅವರು ತಿಳಿಸಿದರು.
ಇತ್ತೀಚೆಗೆ ಕೃತಕ ಬುದ್ದಿಮತ್ತೆಯಿಂದಾಗಿ ಉದ್ಯೋಗವನ್ನು ಕಡಿತಗೊಳಿಸಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ, ಇದು ಬದಲಾಗದಿದ್ದರೆ ಪ್ರತಿಭಾ ಫಲಯಾನ ತಡೆಯಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು. ಜೊತೆಗೆ ಸಂಶೋಧನೆ ಮತ್ತು ತಂತ್ರಜ್ಞಾನಕ್ಕೆ ವಿಪುಲ ಅವಕಾಶ ಕಲ್ಪಿಸಬೇಕು. ಇದರಿಂದ ಒಂದಲ್ಲ ಒಂದು ಕ್ಷೇತ್ರದಲ್ಲಿ ಉದ್ಯೋಗ ನೀಡಬಹುದು ಎಂದು ಜಯಕುಮಾರ್ ವಿವರಿಸಿದರು.
ಪತ್ರಕರ್ತರಾದ ರಾಘವೇಂದ್ರ ಗಣಪತಿ ಅವರು ಮಾತನಾಡಿ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವುದಕ್ಕೆ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಂದು ಕ್ರೀಡೆಯಲ್ಲಿ ಒಲಂಪಿಕ್ಸ್ ಪದಕ ಸಾಧನೆಯ ಪ್ರದರ್ಶನವನ್ನು ಮಾನದಂಡವಾಗಿ ಇಟ್ಟುಕೊಂಡು ಅದಕ್ಕೆ ತಕ್ಕಂತೆ ಕೌಶಲ್ಯ ತರಬೇತಿ ನೀಡಬೇಕು ಎಂದರು.
ಜಾಗತಿಕವಾಗಿ ಭಾರತ ಮೂರನೇ ಪ್ರಬಲ ರಾಷ್ಟ್ರವಾಗಿ ದಾಪುಗಾಲು ಹಾಕುತ್ತಿದೆ. ಆದರೆ ಒಲಂಪಿಕ್ಸ್ ನಲ್ಲಿ
ತೀರ ಹಿಂದುಳಿದಿದೆ ಎಂದರು.
ವಿಶ್ವದ ಜನಸಂಖ್ಯೆಯಲ್ಲಿ ಭಾರತ ಪ್ರಥಮ ಸ್ಥಾನ ಹೊಂದಿದೆ. ಆದರೂ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಸಿಯನ್ನು ನೆಟ್ಟು ಬೆಳಸಬೇಕು, ಅದನ್ನು ಬಿಟ್ಟು ಮರವನ್ನು ಬಾಗಿಸಲು ಸಾಧ್ಯವೇ ಎಂದು ರಾಘವೇಂದ್ರ ಗಣಪತಿ ಅವರು ಪ್ರಶ್ನಿಸಿದರು.
ಚೆಸ್ ಪಂದ್ಯದಲ್ಲಿ ಇಡೀ ವಿಶ್ವದಲ್ಲಿ ಸಾಧನೆಯತ್ತ ಮುನ್ನಡೆದಿರುವುದು ಶ್ಲಾಘನೀಯ ಎಂದರು.
ವೈಜ್ಞಾನಿಕ ಮತ್ತು ತಂತ್ರಜ್ಞಾನ ಸಂಶೋಧನೆಯಲ್ಲಿ ಯುವ ಜನತೆಯ ಪಾತ್ರ ಬಗ್ಗೆ ಎಂ.ವಿ.ರೂಪ , ಕೌಶಲ್ಯಾಧಾರಿತ ಯುವಜನತೆ: ಕುರಿತು ಡಾ.ವಸುಂಧರಾ. ಚಿಂತಕರಾದ ಡಾ.ಸುಧಾಕರ ಹೊಸಹಳ್ಳಿ, ಯುವ ನೇತಾರರಾದ ಮುರುಳಿಧರ ಹಾಲಪ್ಪ ಅವರು ಮಾತನಾಡಿದರು.
ಶಾಂತರಾಮ್ ಅವರು ನಿರ್ವಹಿಸಿದರು ಡಾ.ತಮಿಳ್ ಸೆಲ್ವಿ ನಿರೂಪಿಸಿದರು. ಡಾ.ಎಂ ಗೋವಿಂದರಾಯ ಸ್ವಾಗತಿಸಿದರು, ಆದೂರು ಪ್ರಕಾಶ್ ವಂದಿಸಿದರು.