ಮಂಡ್ಯ: ಜಿಲ್ಲೆಯಲ್ಲಿ ರಾಷ್ಟ್ರೀಯ ಬಾಲ ಸ್ವಸ್ಥ್ಯ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಅವರು ಗುರುವಾರ(ಜೂ.28) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ರಾಷ್ಟ್ರೀಯ ಬಾಲ ಸ್ವಸ್ಥ್ಯ ಕಾರ್ಯಕ್ರಮವು ಅಂಗನವಾಡಿಗಳಲ್ಲಿ 6 ವರ್ಷದೊಳಗಿನ ಹಾಗೂ ಸರ್ಕಾರಿ/ ಅನುದಾನಿತ/ ಸರ್ಕಾರಿ ವಸತಿ ಶಾಲೆಗಳಲ್ಲಿ ವಿದ್ಯಭ್ಯಾಸ ಮಾಡುತ್ತಿರುವ 1 ರಿಂದ 12 ನೇ ತರಗತಿವರಗಿನ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಿ ಆರೋಗ್ಯದಲ್ಲಿ ಯಾವುದೇ ತೊಂದರೆಯಿದ್ದಲ್ಲಿ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದರು.
ಕೆಲವು ಕಾಯಿಲೆಗಳು ಮಕ್ಕಳಿಗೆ ಹುಟ್ಟಿನಿಂದ ಬರುತ್ತದೆ. ಕೆಲವು ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ. ಇವುಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಮಕ್ಕಳು ಗುಣಮುಖರಾಗುತ್ತಾರೆ. ವಿದ್ಯಾರ್ಥಿಗಳನ್ನು ವರ್ಷಕ್ಕೆ ಎರಡು ಬಾರಿ ಚಿಕಿತ್ಸೆಗೆ ಒಳಪಡಿಸುವುದರಿಂದ ಮಕ್ಕಳ ಬೆಳವಣಿಗೆಯಲ್ಲಿ ಯಾವುದೇ ತೊಂದರೆ ಇದ್ದಲ್ಲಿ ತಕ್ಷಣ ವರದಿ ಮಾಡಿ ಚಿಕಿತ್ಸೆ ಕೊಡಿಸಿ ಎಂದರು.
ಸಭೆಯಲ್ಲಿ ಡಿಸೆಂಬರ್ 2023 ರಿಂದ ಏಪ್ರಿಲ್ 2024 ರವರೆಗೆ ಹೆರಿಗೆ ಸಂದರ್ಭದಲ್ಲಿ ಮೃತವಾದ ನವಜಾತ ಶಿಶುಗಳ ಕಾರಣ ಕುರಿತು ಪೋಷಕರೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ,ಆರ್.ಸಿ.ಹೆಚ್.ಒ ಡಾ: ಅನಿಲ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.