ಮಂಡ್ಯ: ಪಟಾಕಿ ಮದ್ದು ಸಿಡಿದು ಬೆಂಕಿ ಹೊತ್ತಿಕೊಂಡ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಜಿ.ಕೆಬ್ಬಹಳ್ಳಿ ಗ್ರಾಮದಲ್ಲಿ ಸೋಮವಾರ ( ಮಾರ್ಚ್ 25 ) ಬೆಳಗಿನ ಜಾವ ನಡೆದಿದೆ.
ತಮಿಳುನಾಡು ಮೂಲದ ರಮೇಶ್ (45) ಮೃತ ವ್ಯಕ್ತಿಯಾಗಿದ್ದು, ವಾನಗಾರ್ (55) ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿ. ಕೆಬ್ಬಹಳ್ಳಿ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆಯುವ ಕಾಲಭೈರವೇಶ್ವರ ಹಬ್ಬಕ್ಕೆಂದು ಪಟಾಕಿ ಸಿಡಿಸುವ ಜವಾಬ್ದಾರಿಯನ್ನು ತಮಿಳುನಾಡು ಮೂಲದ ವ್ಯಕ್ತಿಗಳಿಗೆ ನೀಡಲಾಗಿತ್ತು. ಅದರಂತೆ ನಾಲ್ವರು ಗ್ರಾಮಕ್ಕೆ ಬಂದು ಆಲೆಮನೆಯೊಂದರಲ್ಲಿ ವಾಸ್ತವ್ಯ ಹೂಡಿದ್ದರು.
ಭಾನುವಾರ ರಾತ್ರಿ ಹಬ್ಬ ಮುಗಿದ ನಂತರ ಆಲೆಮನೆಯಲ್ಲಿ ಮೂವರು ಕಾರ್ಮಿಕರು ನಿದ್ರೆ ಮಾಡುತ್ತಿದ್ದಾಗ, ರಮೇಶ್ ಮದ್ದು ತುಂಬುವ ವೇಳೆ ಈ ಅವಘಡ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಆಲೆಮನೆ ಹೆಂಚು ಹಾರು ಹೋಗಿದ್ದು, ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ರಮೇಶ್ ಸ್ಥಳದಲ್ಲಿಯೇ ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಶೀಲನೆ ನಡೆಸಿದ ಡಿಸಿ, ಎಸ್‌ಪಿ:
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಪಡೆದರು. ಘಟನಾ ಸ್ಥಳಕ್ಕೆ ಮೈಸೂರು ಪ್ರಾಂತ್ಯದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿ.ಎಸ್. ಜಯರಾಮಯ್ಯ, ಮೈಸೂರು ವಲಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಪಿ. ಚಂದನ್ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಮಂಡ್ಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಎಂ. ರಾಘವೇಂದ್ರ, ಅಗ್ನಿಶಾಮಕ ಠಾಣಾಧಿಕಾರಿ ವೆಂಕಟೇಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ.





