ಮಂಡ್ಯ/ಮದ್ದೂರು: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಳೆ ಆಂಜನೇಯ ದೇವಾಲಯದ ಬಳಿ ಇಂದು (ಸೋಮವಾರ, ಮೇ.27) ಬೆಳಿಗ್ಗೆಯೇ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ.
ಈ ಆನೆಗಳ ಹಿಂಡಿನಲ್ಲಿ 6 ಆನೆಗಳಿದ್ದು, ಕಾವೇರಿ ವನ್ಯಧಾಮದಿಂದ ಇಲ್ಲಿಗೆ ಆಗಮಿಸಿವೆ ಎಂದು ಹೇಳಲಾಗಿದೆ.
ಆನೆಗಳು ಶಿಂಷಾ ನದಿಯ ಅಕ್ಕಪಕ್ಕದಲ್ಲಿಯೇ ಓಡಾಟ ನಡೆಸುತ್ತಿವೆ. ಇನ್ನು ಆನೆಗಳ ಹಿಂಡು ಕಂಡುಬಂದ ಹಿನ್ನಲೆಯಲ್ಲಿ ಸ್ಥಳೀಯ ಗ್ರಾಮದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚಿಸಿದೆ.
ಈ ಆನೆಗಳ ಹಿಂಡು ದಿಢೀರ್ ಪಟ್ಟಣದ ಕಡೆಗೆ ಬರಲು ಕಾರಣವೇನೆಂಬುದು ಈವರೆಗೆ ತಿಳಿದಿಲ್ಲ. ಸಂಜೆ ಒಳಗಾಗಿ ಆನೆಗಳನ್ನು ಮತ್ತೆ ಕಾಡಿನತ್ತಾ ಮುಖ ಮಾಡಿಸುವಲ್ಲಿ ಅರಣ್ಯ ಇಲಾಖೆ ಕಾರ್ಯೋನ್ಮುಖವಾಗಿದೆ.
ಕಳೆದ ವರ್ಷದಿಂದ ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ. ಕೊಡಗು, ಮಂಗಳೂರು, ಮೈಸೂರು ಭಾಗಗಳಲ್ಲಿ ಅತಿಹೆಚ್ಚು ಮಾನವ-ಪ್ರಾಣಿ ಸಂಘರ್ಷಗಳು ಕಂಡುಬಂದಿವೆ.
ನಿನ್ನೆ(ಭಾನುವಾರ) ಎಚ್.ಡಿ ಕೋಟೆ ತಾಲೂಕಿನಲ್ಲಿ ಹುಲಿಯೊಂದು ಕುರಿಗಾಹಿ ಮಹಿಳೆಯನ್ನು ಹೊತ್ತೊಯ್ದಿತ್ತು. ಇಂದು ಮದ್ದೂರಿನಲ್ಲಿ ಬೆಳ್ಳಂಬೆಳಿಗ್ಗೆಯೇ ಮದ್ದೂರಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ದಿನೇ ದಿನೇ ಕಾಡು ಪ್ರಾಣಿಗಳು ನಾಡಿನತ್ತಾ ಮುಖ ಮಾಡುತ್ತಿರುವುದು ಹೆಚ್ಚಾಗುತ್ತಿದ್ದು, ಇದಕ್ಕೆ ಕಾರಣವೇನು? ಇದನ್ನು ಶಾಶ್ವತವಾಗಿ ತಡೆಯಲು ಮಾಡಬಹುದಾದ ಕ್ರಮಗಳ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.