ಮಂಡ್ಯ : ಯುವಕನ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ನಗರದ ಫ್ಯಾಕ್ಟರಿ ವೃತ್ತದ ಬಾರ್ ಅಂಡ್ ರೆಸ್ಟೋರೆಂಟ್ ಎದುರು ಗುರುವಾರ ರಾತ್ರಿ ದುಷ್ಕರ್ಮಿಗಳು ಕಡಿಲುವಾಗಿಲು ಗ್ರಾಮದ ಗುರು ವಿಲಾಸ್(35) ನನ್ನ ಹತ್ಯೆ ಮಾಡಿದ್ದಾರೆ.
ಬಾರ್ ನಲ್ಲಿ ಮಧ್ಯ ಕುಡಿದ ನಂತರ ಜೊತೆಯಲ್ಲಿ ಇದ್ದವರ ನಡುವೆ ಜಗಳ ನಡೆದಿದ್ದು,ಇದೇ ವೇಳೆ ಗುರುವಿಲಾಸ್ ಹತ್ಯೆ ನಡೆದಿದೆ.
ಮದ್ದೂರು ತಾಲೂಕು ಕಡಿಲುವಾಗಿಲು ಗ್ರಾಮದ ಗುರುಮೂರ್ತಿ – ಜಯಮ್ಮ ದಂಪತಿಗಳ ಪುತ್ರ ಗುರು ವಿಲಾಸ್ ಟಾಟಾ ಎಸಿ ಚಾಲಕನಾಗಿದ್ದು, ಗೆಜ್ಜಲಗೆರೆಯ ಗಾರ್ಮೆಂಟ್ಸ್ ಗೆ ನೌಕರರನ್ನು ಕರೆದುಕೊಂಡು ಹೋಗುತ್ತಿದ್ದನು, ಈ ವೇಳೆ ಮಂಡ್ಯ ಸ್ವರ್ಣ ಸಂದ್ರದ ಮಾನಸರನ್ನು ಪ್ರೀತಿಸಿ ಕಳೆದ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದನು,ಇವರಿಗೆ ಹೆಣ್ಣು ಮಗು ಇತ್ತು.
ಮದುವೆ ನಂತರ ಬೆಂಗಳೂರಿನಲ್ಲಿ ಸ್ವಂತ ಕಾರು ಚಾಲನೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದು ಆದರೆ ಗಂಡ – ಹೆಂಡತಿ ನಡುವೆ ಹೊಂದಾಣಿಕೆ ಇರಲಿಲ್ಲ, ಪತ್ನಿ ನಡವಳಿಕೆ ಮೇಲೆ ಅನುಮಾನಪಟ್ಟಿದ್ದರಿಂದ ಆಗಾಗ್ಗೆ ಕಲಹ ನಡೆಯುತ್ತಿತ್ತು. ಪತ್ನಿ ಮಾನಸ ಗಂಡನನ್ನು ತೊರೆದು ತವರು ಮನೆ ಸೇರಿಕೊಂಡಿದ್ದಳು. ಗುರು ವಿಲಾಸ್ ಸಹ ಮಂಡ್ಯದ ಬಸವನಗುಡಿಯಲ್ಲಿದ್ದ ಅಕ್ಕನ ಮನೆಗೆ ಮರಳಿದ್ದನು.
ಗುರುವಾರ ಸಂಜೆ ಫ್ಯಾಕ್ಟರಿ ವೃತ್ತದಲ್ಲಿರುವ ಸಂತೃಪ್ತಿ ಫ್ಯಾಮಿಲಿ ರೆಸ್ಟೋರೆಂಟ್ ಪಕ್ಕದ ಸಿದ್ದಾರ್ಥ ಕೊಸ್ಟಲ್ ಬಾರ್ ಅಂಡ್ ರೆಸ್ಟೋರೆಂಟ್ ಗೆ ಹೋಗಿದ್ದು ಜೊತೆಯಲ್ಲಿ ಈತನ ಪರಿಚಿತರು ಇದ್ದರು, ರಾತ್ರಿ ತನಕ ಕುಡಿದಿದ್ದು ರಾತ್ರಿ 10 ರ ವೇಳೆ ಜೊತೆಯಲ್ಲಿ ಇದ್ದವರ ನಡುವೆ ಜಗಳ ನಡೆದಿದ್ದು, ವಿಕೋಪಕ್ಕೆ ತಿರುಗಿದಾಗ ತಪ್ಪಿಸಿಕೊಳ್ಳಲು ಬಾರ್ ನಿಂದ ಹೊರ ಓಡಿದ್ದು, ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು ಐಸಿಐಸಿಐ ಬ್ಯಾಂಕ್ ಬಳಿ ದೇಹದ ಬೆನ್ನಿನ ಭಾಗಕ್ಕೆ ಇರಿದಿದ್ದಾರೆ. ನಂತರ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಪತ್ನಿಯ ವಿಚಾರವಾಗಿ ಸ್ವಗ್ರಾಮ ಕಡಿಲು ಬಾಗಿಲು ಗ್ರಾಮದಲ್ಲಿ ಇತ್ತೀಚಿಗೆ ಯುವಕನೊಬ್ಬನ ಮೇಲೆ ಗುರು ವಿಲಾಸ್ ಹಲ್ಲೆ ಮಾಡಿದ್ದನು ಎನ್ನಲಾಗಿದೆ
ಪೂರ್ವ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.