ಮಂಡ್ಯ: ಸಾಲದಿಂದ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಯಲಿಯೂರು ಗ್ರಾಮದ ಬಳಿ ನಡೆದಿದೆ.
ಮಾಸ್ತಪ್ಪ (65), ರತ್ನಮ್ಮ (45), ಮಗಳು ಲಕ್ಷ್ಮೀ(18) ಎಂಬುವವರು ಮೃತ ದುರ್ದೈವಿಗಳಾಗಿದ್ದು. ಮೃತರು ಶ್ರೀರಂಗಪಟ್ಟಣದ ಗಂಜಾಂ ನಿವಾಸಿಗಳು ಎಂದು ತಿಳಿದು ಬಂದಿದೆ.
ಗಂಜಾಂ ನಿವಾಸಿ ಮಾಸ್ತಪ್ಪ ಎಂಬುವವರು ತುಂಬಾ ಬಡವರಾಗಿದ್ದು, ಜೀವನಕ್ಕಾಗಿ ಆಟೋ ಓಡಿಸುತ್ತಿದ್ದರು. ತಮ್ಮ ಕುಟುಂಬ ನಿರ್ವಹಣೆಗಾಗಿ 3 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದರು.
ಸಾಲ ಕೊಟ್ಟವರು ಮನೆ ಬಳಿ ಬಂದು ಗಲಾಟೆ ಮಾಡಿದ ಹಿನ್ನಲೆಯಲ್ಲಿ ಮರ್ಯಾದೆಗೆ ಅಂಜಿ ಕುಟುಂಬ ಸಮೇತ ತಾಲೂಕಿನ ಯಲಿಯೂರು ಬಳಿಯ ವಿಸಿ ನಾಲೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು ಮತ್ತೊಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇನ್ನು ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.





