Mysore
29
clear sky

Social Media

ಬುಧವಾರ, 28 ಜನವರಿ 2026
Light
Dark

ಮಂಡ್ಯ| ಜೂಜಾಟದಲ್ಲಿ ತೊಡಗಿದ್ದ 29 ಮಂದಿ ಬಂಧನ: 10 ಲಕ್ಷ ರೂ. ವಶ

ಮಂಡ್ಯ: ನಗರದ ಹೊರವಲಯದಲ್ಲಿರುವ ಅಗ್ರಿ ಕ್ಲಬ್ ಮೇಲೆ ದಾಳಿ ನಡೆಸಿರುವ ಮಂಡ್ಯ ಗ್ರಾಮಾಂತರ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ 29 ಮಂದಿಯನ್ನು ಬಂಧಿಸಿ, 10 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.

ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ವಿ.ಜೆ. ಶೋಭಾರಾಣಿ ಅವರ ನೇತೃತ್ವದಲ್ಲಿ ಸೋಮವಾರ ತಡರಾತ್ರಿ ದಾಳಿ ನಡೆಸಿದ ಗ್ರಾಮಾಂತರ ಠಾಣೆ ಪೊಲೀಸರು ಜೂಜಿನಲ್ಲಿ ತೊಡಗಿದ್ದ 29 ಜನರನ್ನು ವಶಕ್ಕೆ ಪಡೆದು, 10 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.

ಸಾಮಾನ್ಯವಾಗಿ ಕ್ಲಬ್‌ಗಳಲ್ಲಿ ರಾತ್ರಿ 11 ಗಂಟೆಯವರೆಗೆ ಜಾಕ್ ಪಾಟ್ ಹಾಗೂ ರಮ್ಮಿ ಆಡಲು ಅವಕಾಶ ನೀಡಲಾಗುತ್ತದೆ. ಆದರೆ, ಅಗ್ರಿ ಕ್ಲಬ್‌ನಲ್ಲಿ ಸಮಯ ಮೀರಿ ಇತರೆ ಜೂಜಿನಲ್ಲಿ ತಡರಾತ್ರಿಯವರೆಗೆ ಹಲವರು ತೊಡಗಿದ್ದರು ಎನ್ನಲಾಗಿದೆ. ಅಗ್ರಿ ಕ್ಲಬ್‌ನ ಸದಸ್ಯರಲ್ಲದೆ ರಾಮನಗರ, ಚನ್ನಪಟ್ಟಣ ಭಾಗದಲ್ಲಿ ಹಲವರು ಗೆಸ್ಟ್ ಹೆಸರಿನಲ್ಲಿ ಬಂದು ಇಲ್ಲಿ ಜೂಜಿನಲ್ಲಿ ತೊಡಗಿದ್ದರು ಎನ್ನಲಾಗಿದ್ದು, ಇದರ ಮಾಹಿತಿ ಪಡೆದ ಪೊಲೀಸರು, ಮಧ್ಯರಾತ್ರಿ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಕೆಲವರು ಕೌಂಪೌಂಡ್ ನೆಗೆದು ಪರಾರಿಯಾದರು ಎಂದು ತಿಳಿದುಬಂದಿದೆ.

ದಾಳಿ ಸಂದರ್ಭದಲ್ಲಿ ೧೦ ಲಕ್ಷ ರೂ.ಗಿಂತಲೂ ಹೆಚ್ಚು ಹಣ ಸಿಕ್ಕಿರುವುದರಿಂದ ಇಲ್ಲಿ ರಮ್ಮಿ, ಜಾಕ್‌ಪಾಟ್ ಅಷ್ಟೇ ಅಲ್ಲದೆ ಜೂಜು ನಡೆಯುತ್ತಿರುವ ಅನುಮಾನಗಳು ವ್ಯಕ್ತವಾಗಿದೆ. ಪದೇ ಪದೇ ಅಗ್ರಿ ಕ್ಲಬ್ ಮೇಲೆ ಇಂತಹ ದಾಳಿ ನಡೆಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

Tags:
error: Content is protected !!