ಮಂಡ್ಯ : ಮೈಷುಗರ್ ಸಕ್ಕರೆ ಕಾರ್ಖಾನೆಯು ಯಶಸ್ವಿಯಾಗಿ ಕಬ್ಬು ನುರಿಸಲು ಮೂರನೇ ಬಾರಿಗೆ 10 ಕೋಟಿ ರೂ.ಗಳ ನೆರವನ್ನು ನೀಡಿ ಸಹಕರಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಎಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸತತವಾಗಿ ನೆರವು ನೀಡುತ್ತಿದ್ದು, ಕಳೆದ ಹಂಗಾಮಿನಲ್ಲಿ ಸರ್ಕಾರದ ಅನುದಾನ ಪಡೆಯದೇ ರೈತರಿಗೆ ಪೂರ್ಣ ಹಣವನ್ನು ಪಾವತಿ ಮಾಡಿ ಮೈಷುಗರ್ ಇತಿಹಾಸದಲ್ಲಿ ಮಾದರಿಯಾಗಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತತ್ಸಂಬಂಧ 2023ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಮೈಷುಗರ್‌ಗೆ 50 ಕೋಟಿ ಅನುದಾನ ನೀಡಿಲಾಗಿತ್ತು, ಇತ್ತೀಚೆಗೆ 53 ಕೋಟಿ ವಿದ್ಯುತ್ ಬಿಲ್ ಮನ್ನ ಮಾಡಿದ ಸರ್ಕಾರ ಇದೀಗ 10 ಕೋಟಿ ರೂ. ನೆರವನ್ನು ನೀಡಿದೆ. ಈ ಬಾರಿಯೂ ಕಬ್ಬು ನಾಟಿ ಮಾಡಿದ ಹಿರಿತನದ ಆಧಾರದಲ್ಲಿ ನೊಂದಣಿಯಾಗಿರುವ ಕಬ್ಬನ್ನು ಯಶಸ್ವಿಯಾಗಿ ನುರಿಯಲಿದ್ದೇವೆ ಎಂದು ಹೇಳಿದರು.
ಒಪ್ಪಿಗೆಯಾಗಿರುವ ಕಬ್ಬನ್ನು ಯಶಸ್ವಿ ಯಾಗಿ ಅರೆಯುವ ಮೂಲಕ ಈ ಬಾರಿ ಪಡೆಯುವ ನೆರವಿನಲ್ಲಿ ಕನಿಷ್ಠ 4 ಕೋಟಿ ರೂಗಳನ್ನು ಹಿಂದಿರುಗಿಸುವ ಮೂಲಕ ಇತಿಹಾಸ ಬರೆಯುವ ಯೋಜನೆ ರೂಪಿಸಿಕೊಂಡಿರುವುದಾಗಿ ಪ್ರಶ್ನೆಗೆ ಉತ್ತರ ನೀಡಿದ ಅವರು, ನಗರ ವ್ಯಾಪ್ತಿಯಲ್ಲಿ ಮೈಷುಗರ್ ಕಂಪನಿಗೆ ಸೇರಬೇಕಾದ ಆರೂವರೆಯಿಂದ ಏಳು ಎಕರೆ ಹಾಗೂ ಕಂದಾಯ ವ್ಯಾಪ್ತಿಯ 20ರಿಂದ 30 ಎಕರೆ ಒತ್ತುವರಿ ಭೂಮಿಯನ್ನು ತೆರವುಗೊಳಿಸಲು ಕ್ರಮ ವಹಿಸಲಾಗುವುದು. ವಾಣಿಜ್ಯವಾಗಿ ಇಂದಿನ ದರದಂತೆ ಬಾಡಿಗೆ ನೀಡುವುದಾದರೆ ಅವರಿಗೇ ಬಾಡಿಗೆಗೆ ನೀಡಲಾಗುವುದು ಎಂದು ತಿಳಿಸಿದರು.
ಜು.28ರಂದು ಮದ್ದೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಹಾಗೂ ಉದ್ಘಾಟನೆಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಂಪುಟದ ಅನೇಕ ಸಚಿವರು ಆಗಮಿಸಲಿದ್ದು, ಸದರಿ ಕಾರ್ಯ ಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದರು.
ಗೋಷ್ಟಿಯಲ್ಲಿ ಕೆ.ಸುರೇಶ್, ಶ್ರೀಧರ್, ವೀಣಾ ಶಂಕರ್, ಉದಯ್, ದೇವಯ್ಯ, ಸಿ.ಎಂ.ದ್ಯಾವಪ್ಪ, ನಾಗರಾಜು ಇದ್ದರು.





