Mysore
20
overcast clouds

Social Media

ಬುಧವಾರ, 18 ಡಿಸೆಂಬರ್ 2024
Light
Dark

1 ಕೋಟಿ ರೂ. ವೆಚ್ಚದಲ್ಲಿ ಕಲಾಮಂದಿರ ನವೀಕರಣ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಹಲವಾರು ವರ್ಷಗಳಿಂದ ದುರಸ್ಥಿಯಾಗಬೇಕಿದ್ದ ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ನವೀಕರಣ ಕಾಮಗಾರಿಯನ್ನು ಒಟ್ಟು 1.08 ಕೋಟಿ ರೂ. ವೆಚ್ಚದಲ್ಲಿ ನೆರವೇರಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.

ಅವರು ಇಂದು ಮಂಡ್ಯ ನಗರದ ಕಲಾಮಂದಿರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ನವೀಕರಣ ಕಾಮಗಾರಿ ಉದ್ಘಾಟನೆ ಮಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಬಹಳ ವರ್ಷಗಳಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರವು ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಕ್ತವಾಗಿರದೆ ಮಳೆ ಬಂದಾಗ ಸೋರಿಕೆ, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಸೇರಿದಂತೆ ಇನ್ನಿತರೆ ಸಮಸ್ಯೆಗಳಿದ್ದು, ಉಪಯೋಗಕ್ಕೆ ಅಡಚಣೆಯಾಗಿತ್ತು. ಜಿಲ್ಲೆಯಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಾಮಂದಿರದಲ್ಲಿ ಜರುಗಬೇಕು ಎಂಬ ಉದ್ದೇಶ ಹಾಗೂ ಕಲಾವಿದರ ಒತ್ತಾಯದ ಮೇರೆಗೆ ನವೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ನಾಳೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್ ಅವರು ಮಾತನಾಡಿ, ಬಹಳ ವರ್ಷಗಳಿಂದ ನಗರದ ಕಲಾಮಂದಿರವು ಹದಗೆಟ್ಟ ಸ್ಥಿತಿಯಲ್ಲಿದ್ದು, ದುರಸ್ಥಿಯಾಗಬೇಕಿತ್ತು. ಹಲವಾರು ರಂಗಭೂಮಿ ಕಲಾವಿದರ ಜೀವಾಳವಾದ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹಲವಾರು ನಾಟಕಗಳನ್ನು ಪ್ರದರ್ಶನ ಮಾಡಲು ನಮ್ಮ ಸರ್ಕಾರ ಕಲಾಮಂದಿರವನ್ನು ನವೀಕರಣಕ ಮಾಡಲಾಗಿದೆ. 2 ನೇ ಹಂತದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಕೂರುವ ಆಸನಗಳಿಗೆ ಸೀಟ್ ಕವರ್ ಹಾಗೂ ಇನ್ನಿತರೆ ವ್ಯವಸ್ಥೆಗೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕಿ ಡಾ. ಮೀರಾಶಿವಲಿಂಗಯ್ಯ, ನಗರಸಭೆ ಅಧ್ಯಕ್ಷ ಎಂ. ವಿ. ಪ್ರಕಾಶ್, ಉಪಾಧ್ಯಕ್ಷ ಅರುಣ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ ಬಿ ವಿ ನಂದೀಶ್, ಕಸಾಪ ಗೌರವ ಕಾರ್ಯದರ್ಶಿ ಹರ್ಷ ಪಣ್ಣೆದೊಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: