Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಜಾನಪದ ಪ್ರಕಾರಗಳ ಕಣ್ತುಂಬಿಕೊಂಡ ಜನರು

ಮಂಡ್ಯ: ಆಧುನಿಕತೆ ಭರದಲ್ಲಿ ನಶಿಸುತ್ತಿರುವ ಜಾನಪದ ಜಗತ್ತಿನ ಎಲ್ಲ ಪ್ರಕಾರಗಳನ್ನು ನಗರದ ನಾಗರಿಕರು ಕಣ್ತುಂಬಿಕೊಂಡರು. ವಿಶಿಷ್ಟ ಕಲೆಗಳ ಪ್ರದರ್ಶನಕ್ಕೆ ಮನಸೋತು ನಿಬ್ಬೆರಗಾದರು. ಜಾನಪದ ಕಲಾತಂಡಗಳ ಮೆರವಣಿಗೆ ಅಕ್ಷರಶಃ ಜನಪದ ಜಾತ್ರೆಯನ್ನಾಗಿಸಿತ್ತು.


ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಹಾಗೂ ಜಿಲ್ಲಾ ಘಟಕದ ವತಿಯಿಂದ ನಡೆದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದಲ್ಲಿ ನಗರದ ವಿವಿಧ ಬೀದಿಗಳಲ್ಲಿ ನಡೆದ ಜನಪದರ ನೃತ್ಯ ಪ್ರದರ್ಶನ ಆಕರ್ಷಕವಾಗಿತ್ತು. ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.  ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾವಿದರ ತಂಡಗಳು, ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರದರ್ಶನ ,ಮಾಡುತ್ತಾ ಬೆಂಗಳೂರು-ಮೈಸೂರು ಹೆದ್ದಾರಿ, ಮಹಾವೀರ ವೃತ್ತದಿಂದ ಹೊಸಹಳ್ಳಿ ವೃತ್ತ, ನೂರಡಿ ರಸ್ತೆಯ ಮೂಲಕ ವೇದಿಕೆಗೆ ಆಗಮಿಸಿದರು.

ಜನಪದ ಜಾತ್ರೆಯಲ್ಲಿ ದೇಶಿ ಜಾನಪದ ಕಲೆಗಳು ಸುಂದರವಾಗಿ ಅನಾವರಣಗೊಳ್ಳುವುದರ ಮೂಲಕ ನಗರದ ಜನರಿಗೆ ವಿಶಿಷ್ಟ ಅನುಭವ ನೀಡಿದವು. ಮಂಡ್ಯದ ಪ್ರಮುಖ ಆಕರ್ಷಣೆಯಾದ ಪೂಜಾ ಕುಣಿತ, ಡೊಳ್ಳು ಕುಣಿತ ಗಮನ ಸೆಳೆಯಿತು. ಉಳಿದಂತೆ ಗೊರವರ ಕುಣಿತ, ಗೊರುಕಾನ ನೃತ್ಯ, ಚಿಟ್‌ಮೇಳ, ಕೋಲಾಟ, ಜಗ್ಗಲಿಗೆ ಮೇಳ, ಎಂ.ನಗಾರಿ, ಸುಗ್ಗಿ ಕುಣಿತ, ಹಗಲುವೇಷ, ಕೊರಣಿಗೆ ಭಾವನೃತ್ಯ, ಪುರುವಂತಿಕೆ ಮೇಳ, ಗೊಂದಲಿಗರ ಮೇಳ, ಹೆಜ್ಜೆಮೇಳ, ಕಂಸಾಳೆ, ಪೂಜಾಕುಣಿತ, ವೀರಭದ್ರನ ಕುಣಿತ, ಸೂತ್ರದ ಗೊಂಬೆ, ಗಾರುಡಿಗೊಂಬೆ ಗಮನ ಸೆಳೆದವು, ವೀರಗಾಸೆ ಮೂಲಕ ಪುರವಂತರ ರೋಷಾವೇಶ, ಲಂಬಾನಿ ಮಹಿಳೆಯರು ವಿಶಿಷ್ಟ ಹಾಡು ಕುಣಿತ, ಕೋಲಾಟ ಹಾಗೂ ಸೋಮನ ಕುಣಿತಗಳು ಮುದ ನೀಡಿದವು.
ಕಹಳೆ, ಕಂಸಾಳೆ, ಜಗ್ಗಲಿಗೆ, ಡೊಳ್ಳು, ನಗಾರಿ, ತಮಟೆ, ಡೋಲು, ಕರಡಿ ಮಜಲು, ಚೌಡಿಕೆಗಳ ನಾದ ಅನುರಣಿಸಿದವು. ಗೀಗೀ ನೀಲಗಾರರ ಪದಗಳು ಮತ್ತು ಸೋಬಾನೆ ಪದಗಳು ಹೊಸ ಲೋಕವನ್ನೇ ಸೃಷ್ಟಿಸಿದವು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ