ಚಾಮರಾಜನಗರ: ಮದುವೆ ಮನೆಯಲ್ಲಿ ಕಳೆದುಕೊಂಡಿದ್ದ 42 ಗ್ರಾಂ ಚಿನ್ನದ ಸರವನ್ನು ರಾಮಸಮುದ್ರ ಬಡಾವಣೆಯ ನಿರ್ಮಲಾ ನಾಗರಾಜು ಎಂಬ ಮಹಿಳೆ ಮಾಲೀಕರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ನಗರದ ರಾಮಸಮುದ್ರ ಬಡಾವಣೆಯ ನಿವಾಸಿ ಆರೋಗ್ಯ ಇಲಾಖೆಯ ರವಿ ಮತ್ತು ಯು.ಬಿ. ಮಹದೇವಮ್ಮ ಅವರ ಪುತ್ರಿ ಡಾ. ಅನ್ನಪೂರ್ಣ ಮತ್ತು ಡಾ. ಗುರುಪ್ರಸಾದ್ ಅವರ ವಿವಾಹದ ಸಂದರ್ಭದಲ್ಲಿ ರಾಮಸಮುದ್ರದವರೇ ಆದ ಬ್ರಿಜೇಶ್ ಕುಮಾರ್ ( ಬಾಂಬೆ) ಪತ್ನಿ ಭಾನುಮತಿ ಅವರ, 42 ಗ್ರಾಂ ತೂಕದ ಸುಮಾರು ೨.೩೦ ಲಕ್ಷ ಮೌಲ್ಯದ ಚಿನ್ನದ ಸರವನ್ನು ಜನಜಂಗುಳಿ ನಡುವೆ ಕಳೆದುಕೊಂಡಿದ್ದರು.
ಚಿನ್ನದ ಸರ ಕಳೆದುಕೊಂಡ ಮಹಿಳೆ ಭಾನುಮತಿ ಆತಂಕಕ್ಕೆ ಒಳಗಾಗಿ ಕಣ್ಣೀರು ಸುರಿಸುತ್ತಾ ಕಳೆದುಕೊಂಡ ಚಿನ್ನದ ಸರದ ಹುಡುಕಾಟ ನಡೆಸಿದ್ದರು. ಈ ವೇಳೆ ಹುಡುಕಾಟ ಗಮನಿಸಿದ ರಾಮಸಮುದ್ರದ ಗೃಹಿಣಿ ನಿರ್ಮಲಾ ನಾಗರಾಜು ಅವರು ಚಿನ್ನದ ಸರ ನನಗೆ ಸಿಕ್ಕಿದೆ ಎಂದು ಭಾನುಮತಿ ಅವರಿಗೆ ಹಿಂದಿರುಗಿಸಿದರು. ಮದುವೆ ಮನೆಯಲ್ಲಿದ್ದವರು ನಿರ್ಮಲಾ ಅವರ ಪ್ರಾಮಾಣಿಕತೆಯನ್ನು ಮೆಚ್ಚಿದ್ದಾರೆ.