Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸಮಸ್ತ ನಾಗರೀಕರು ಸೌಹಾರ್ದಯುತ ಮತ್ತು ಸಹಬಾಳ್ವೆ ನಡೆಸುವಂತಾಗಲಿ : ಆರ್.ಅಶೋಕ್

ಮಂಡ್ಯ: ಕರ್ನಾಟಕ ರಾಜ್ಯ ಏಕೀಕರಣಗೊಂಡು 66 ವರ್ಷ ಪೂರ್ಣಗೊಂಡು, 67ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಈ ಶುಭ ಘಳಿಗೆಯಲ್ಲಿ ಕರ್ನಾಟಕ ರಾಜ್ಯ ಮತ್ತು ಜಿಲ್ಲೆಯಾದ್ಯಂತ ಸುಖ, ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಸಲಿ ಹಾಗೂ ಸಮಸ್ತ ನಾಗರೀಕರು ಸೌಹಾರ್ದಯುತ ಮತ್ತು ಸಹಬಾಳ್ವೆ ನಡೆಸುವಂತಾಗಲಿ ಎಂದು ಕಂದಾಯ ಸಚಿವರಾದ ಆರ್.ಅಶೋಕ್ ರವರು ತಿಳಿಸಿದರು.

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ 67 ನೇ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕವನ್ನು ಭಾರತದ ಅವಿಭಾಜ್ಯ ಅಂಗವಾಗಿ ಪರಿಕಲ್ಪಿಸಿ, ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ..! ಎನ್ನುವ ನಾಡಗೀತೆಯನ್ನು ಸವಿಯುತ್ತಾ.. ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಎಂಬ ಕವಿವಾಣಿಯಂತೆ ಅಖಂಡ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲಾ ಮಹನೀಯರುಗಳನ್ನು ಸ್ಮರಿಸುವ ಸುದಿನವೇ ಕರ್ನಾಟಕ ರಾಜ್ಯೋತ್ಸವ ಎಂದರು.

ದಶಕಗಳ ಹೋರಾಟದ ಫಲವಾಗಿ 1956ನೇ ನವೆಂಬರ್ 1 ರಂದು ಅಖಂಡ ಕರ್ನಾಟಕದ ಚದುರಿದ ಪ್ರದೇಶಗಳೆಲ್ಲಾ ಒಗ್ಗೂಡಿ ಮೈಸೂರು ರಾಜ್ಯ ಉದಯವಾಯಿತು. ಇದಕ್ಕಾಗಿ ಹೋರಾಡಿದ ಆಲೂರು ವೆಂಕಟರಾಯರು, ಬಿ.ಎಂ. ಶ್ರೀಕಂಠಯ್ಯ, ಅ.ನ. ಕೃಷ್ಣರಾಯರು, ಮಂಗಳವೇಡೆ ಶ್ರೀನಿವಾಸರಾಯರು, ಎಸ್. ನಿಜಲಿಂಗಪ್ಪ, ಕೆ.ಎಫ್. ಪಾಟೀಲ, ಗೋರೂರು ರಾಮಸ್ವಾಮಿ ಅಯ್ಯಂಗಾರ, ಕಡಿದಾಳ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಎಚ್.ಎಸ್. ದೊರೆಸ್ವಾಮಿ, ಪಾಟೀಲ ಪುಟ್ಟಪ್ಪ ಸೇರಿದಂತೆ ಹಲವು ಗಣ್ಯರು ಹಾಗೂ ಅಸಂಖ್ಯಾತ ಲೇಖಕ ಮತ್ತು ಲೇಖಕಿಯರನ್ನು, ಸಂಘ ಸಂಸ್ಥೆಗಳನ್ನು, ಪತ್ರಿಕೋದ್ಯಮಿಗಳನ್ನು ಹಾಗೂ ಹೋರಾಟಗಾರರನ್ನು ನೆನೆಯಬೇಕು ಎಂದರು.

ರಾಜ್ಯದ ಸರ್ವಾಂಗೀಣ ಪ್ರಗತಿಗೆ ಬುನಾದಿ ಹಾಕಿದ ದಿವಂಗತ ಡಿ.ದೇವರಾಜ ಅರಸು ರವರು 1973 ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು ಎಂದು ಹೇಳಿದರು.

ಕರ್ನಾಟಕದ ಇತಿಹಾಸ ಅಪಾರ ವಿಶಾಲವಾದುದು. ಕದಂಬರು, ರಾಷ್ಟ್ರಕೂಟರು, ಗಂಗರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ಮೈಸೂರಿನ ಒಡೆಯರಂತಹ ರಾಜ ಮನೆತನದವರು ಆಳಿದಂತಹ ಈ ನಾಡು. ಕೆಂಪೇಗೌಡರು, ವೀರರಾಣಿ ಚನ್ನಮ್ಮ, ಓನಕೆ ಓಬವ್ವ, ಬೆಳವಾಡಿ ಮಲ್ಲಮ್ಮ, ರಾಯಣ್ಣರಂತಹ ವೀರರಿಗೆ ಜನ್ಮ ನೀಡಿದ ನಾಡು. ದಾಸರು, ಶರಣರಂತಹ ವಿಚಾರವಾದಿಗಳು ನಾಡಿನಲ್ಲಿ ಹುಟ್ಟಿ, ನಾಡಿನ ಕಲೆ, ಸಾಹಿತ್ಯ, ಸಂಗೀತವನ್ನು ಶ್ರೀಮಂತಗೊಳಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಕಲೆ, ಸಾಹಿತ್ಯಕ್ಕೆ ನಮ್ಮ ಕನ್ನಡಿಗರು ನೀಡಿದ ಅಪಾರವಾದ ಕೊಡುಗೆಯನ್ನು ನಾವು ಹಂಪಿ, ಐಹೊಳೆ, ಬಾದಾಮಿ, ಪಟ್ಟದಕಲ್ಲು, ಬೇಲೂರು, ಹಳೇಬೀಡು, ಸೋಮನಾಥಪುರ ಮುಂತಾದ ಶಿಲ್ಪಕಲೆಗಳಲ್ಲಿ ಕಾಣಬಹುದಾಗಿದೆ ಎಂದರು.

ಪ್ರಾಚೀನ ಕವಿಗಳಾದ ಆದಿಕವಿ ಪಂಪ, ರನ್ನ, ಪೊನ್ನ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ ಕವಿಗಳು ಸರ್ವ ಮಾನ್ಯವಾಗಿದ್ದಾರೆ. ದಾಸ ಶ್ರೇಷ್ಠರಾಗಿ ಜನಮನ ಗೆದ್ದಿರುವ ಪುರಂದರದಾಸರು ಮತ್ತು ಕನಕದಾಸರನ್ನು ಮರೆಯಲು ಸಾಧ್ಯವಿಲ್ಲ. ಅಲ್ಲದೆ ಈ ಸಂದರ್ಭದಲ್ಲಿ, ನಮ್ಮ ರಾಷ್ಟ್ರಕವಿಗಳಾದ ಗೋವಿಂದ ಪೈ ರವರು, ಕುವೆಂಪು ರವರು ಮತ್ತು ಜಿ.ಎಸ್.ಶಿವರುದ್ರಪ್ಪನವರನ್ನು ಸ್ಮರಿಸಬೇಕಿದೆ ಎಂದು ಹೇಳಿದರು.

ಸೀತರಾಮ ಶಾಸ್ತ್ರಿ, ರಾಮಮೂರ್ತಿ, ಬಿ.ಎಂಶ್ರೀಕಂಠಯ್ಯ, ಜಿ.ವೆಂಕಟಸುಬ್ಬಯ್ಯ, ಪು.ತಿ ನರಸಿಂಹಚಾರ್, ಮುದ್ದಣ್ಣ, ಮಹಲಿಂಗರಂಗ, ಪಂಜೆ ಮಂಗೇಶರಾಯರ, ಗೋವಿಂದ ಪೈ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವರಕವಿ ಡಾ. ದ.ರಾ.ಬೇಂದ್ರೆ, ತೀ.ನಂ.ಶ್ರೀಕಂಠಯ್ಯ, ಡಿ.ಎಸ್. ಕರ್ಕಿ, ಜಿ.ಪಿ. ರಾಜರತ್ನಂ, ಪೂರ್ಣಚಂದ್ರ ತೇಜಶ್ವಿ, ಸಿದ್ದಯ್ಯ ಪುರಾಣಿಕ್, ಕೆ.ಎಸ್. ನಿಸಾರ್ ಅಹಮದ್, ಡಾ.ಸಾ.ಶಿ. ಮರುಳಯ್ಯ, ಜಿ.ಎಸ್. ಸಿದ್ದಲಿಂಗಯ್ಯ ಹೀಗೆ ಕನ್ನಡ ನಾಡು-ನುಡಿಯ ಸಿರಿಯನ್ನು ಹೆಚ್ಚಿಸಿರುವ ಕವಿ-ಸಾಹಿತಿಗಳ ಪಟ್ಟಿ ಮುಗಿಯದು ಎಂದರು.

ಕುವೆಂಪುರವರು, ಬೇಂದ್ರೆಯವರು, ಮಾಸ್ತಿಯವರು, ಗೋಕಾಕ್ರವರು, ಶಿವರಾಮ ಕಾರಂತರವರು, ಅನಂತಮೂರ್ತಿಯವರು, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರವರು ಕನ್ನಡಕ್ಕೆ ಹೆಮ್ಮೆಯ ರೂಪದಲ್ಲಿ ಜ್ಞಾನಪೀಠ ಪ್ರಶಸ್ತಿ ತಂದುಕೊಡಲು ಕಾರಣರಾಗಿದ್ದಾರೆ. ಇದು ನಮ್ಮ ಭಾಷೆಯ ಹೆಗ್ಗಳಿಕೆ.

ಜಿಲ್ಲೆಯಲ್ಲಿ 2022-23 ನೇ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದ ರಾಜ್ಯದ ಬಹುತೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅತಿವೃಷ್ಟಿಯಿಂದ ಹಾನಿಯಾಗಿದ್ದ45,100 ಮನೆಗಳಿಗೆ ಪರಿಹಾರ ವಿತರಿಸಲು ರೂಂ.309.00 ಕೋಟಿಗಳು, ಬೆಳೆ ಹಾನಿಗೆ 39,255 ಕುಟುಂಬಗಳಿಗೆ ತಲಾ ರೂ.10,000 ಗಳನ್ನು ವಿತರಿಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ( ಬಗರ್ ಹುಕುಂ) ರೈತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದನ್ನು ತಪ್ಪಿಸುವುದಕ್ಕಾಗಿ ಹಾಗೂ ಈಗಾಗಲೇ ಮೊಕದ್ದಮೆ ದಾಖ ಲಿಸಿರುವುದನ್ನು ರದ್ದುಪಡಿಸಲು ಕರ್ನಾಟಕ ಭೂಕಳಿಕೆ ನಿಷೇಧ ಅಧಿನಿಯಮ 2011ಕ್ಕೆ ತಿದ್ದುಪಡಿ ತರಲಾಗಿದೆ ಎಂದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತ ಫಲಾನುಭವಿಗಳಿಗೆ ತಲಾ ರೂ. 2000/-ರಂತೆ 3 ಸಮಾನ ಕಂತುಗಳಲ್ಲಿ ಕೇಂದ್ರ ಸರ್ಕಾರದಿಂದ ಒಟ್ಟು ರೂ. 6000/- ಹಾಗೂ ಇದರ ಜೊತೆ ರಾಜ್ಯ ಸರ್ಕಾರದಿಂದ ತಲಾ ರೂ. 2000/-ರಂತೆ ಒಟ್ಟು ರೂ. 4000/- ಆರ್ಥಿಕ ನೆರವು ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಇದುವರೆವಿಗೂ 270572 ಅರ್ಹ ಫಲಾನುಭವಿಗಳಿಗೆ ಸಹಾಯಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿರುತ್ತದೆ.

ಆತ್ಮನಿರ್ಭರ ಭಾರತ ಅಭಿಯಾನದಡಿ ಅಸಂಘಟಿತ ವಲಯದಲ್ಲಿರುವ ಸೂಕ್ಷ್ಮ ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು ಪ್ರೋತ್ಸಾಹಿಸಿ, ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ಅವುಗಳನ್ನು ಸಂಘಟಿತ ವಲಯಕ್ಕೆ ತರುವುದು ಹಾಗೂ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಸ್ಥೆಗಳು ಹಾಗೂ ಉತ್ಪಾದಕ ಸಹಕಾರಿ ಸಂಘಗಳಿಗೆ ಅವುಗಳ ಸರಪಳಿಕೊಂಡಿಯೊಂದಿಗೆ ಉತ್ತೇಜನ ನೀಡಲು ಮಂಡ್ಯ ಜಿಲ್ಲೆಯಲ್ಲಿ ಇದುವರೆವಿಗೂ 75 ರೈತ ಉದ್ದಿಮೆದಾರರಿಗೆ, ರೂ 22.17 ಕೋಟಿ ಮೊತ್ತದ ಸಾಲ ಮಂಜೂರು ಮಾಡಲಾಗಿದ್ದು,ರೂ 7.08 ಕೋಟಿ ಸಹಾಯಧನವನ್ನು ಮಂಜೂರು ಮಾಡಲಾಗಿದೆ. ಮಂಡ್ಯ ಜಿಲ್ಲೆಯೂ ಸದರಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.

ರೈತರು ತಾವು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ರೂಪಿಸಿಕೊಳ್ಳಲು, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಬ್ರಾಂಡಿಂಗ್ ಮಾಡುವ ಪ್ರಮುಖ ಉದ್ದೇಶದಿಂದ ಮಂಡ್ಯ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮತ್ತು ಇತರೆ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಒಟ್ಟು 25 ರೈತ ಉತ್ಪಾದಕರ ಸಂಸ್ಥೆಗಳನ್ನು ರಚನೆ ಮತ್ತು ಅನುಷ್ಠಾನ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯ ಒಟ್ಟು 1,346 ಜನವಸತಿ ಗ್ರಾಮಗಳ ಪೈಕಿ ಈವರೆಗೆ 1,342 ಗ್ರಾಮಗಳಿಗೆ ಸಾರ್ವಜನಿಕ ಸ್ಮಶಾನ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಕಳೆದ 4 ವರ್ಷಗಳಲ್ಲಿ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಲು 244 ಎಕರೆ 05 ಗುಂಟೆ ಜಮೀನನ್ನು ಕಾಯ್ದಿರಿಸಲಾಗಿರುತ್ತದೆ. ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಡಿ” ಯಲ್ಲಿ ಮಂಡ್ಯ ಜಿಲ್ಲೆಯ ಒಟ್ಟು 2,92,882 ಕುಟುಂಬಗಳಿಗೆ ಉಚಿತವಾಗಿ ಆರ್.ಟಿ.ಸಿ., ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗಿರುತ್ತದೆ ಎಂದರು.

ಮಂಡ್ಯ ಜಿಲ್ಲೆಯ ದಾಖಲೆ ರಹಿತ ಜನವಸತಿಗಳನ್ನು “ಕಂದಾಯ ಗ್ರಾಮಗಳನ್ನಾಗಿ” ಘೋಷಣೆ ಮಾಡುವ ಕುರಿತಂತೆ ಒಟ್ಟು 137 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, 94 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, 740 ಜನರಿಗೆ ಹಕ್ಕು ಪತ್ರಗಳನ್ನು ನೀಡಲಾಗಿರುತ್ತದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 233 ಗ್ರಾಮಪಂಚಾಯಿತಿಗಳಿದ್ದು, ಒಟ್ಟು 310 ಗ್ರಾಮ ಒನ್ ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದ್ದು, ಸದರಿ ಕೇಂದ್ರದಲ್ಲಿ 79 ಇಲಾಖೆಗಳ ಒಟ್ಟು 799 ಸೇವೆಗಳು ಲಭ್ಯವಿದ್ದು, ಜೂನ್ 2022 ರಿಂದ ಸೇವೆ ಪ್ರಾರಂಭವಾಗಿದ್ದು, 50,833 ಕ್ಕಿಂತ ಹೆಚ್ಚು ಅರ್ಜಿಗಳು ಸ್ವೀಕೃತವಾಗಿರುತ್ತವೆ ಹಾಗೂ ಗ್ರಾಮ ಒನ್ ಕೇಂದ್ರಗಳಿಂದ 2,03,000 00 ಕಾರ್ಡ್ ನೋಂದಾಯಿಸಲಾಗಿದೆ ಎಂದು ಹೇಳಿದರು.

ಹಲೋ ಕಂದಾಯ ಸಚಿವರೇ ಯೋಜನೆ” ಯಡಿ 72 ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ಆದೇಶ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ಇದುವರೆಗೆ 3068 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿರುತ್ತದೆ. ಸಾಮಾಜಿಕ ಭದ್ರತಾ ಯೋಜನೆಯಡಿ 9 ವಿವಿಧ ಯೋಜನೆಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 3,61,063 ಜನ ಫಲಾನುಭವಿಗಳು ಮಾಸಿಕ ಪಿಂಚಣಿಯನ್ನು ಪಡೆಯುತ್ತಿರುತ್ತಾರೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಸರ್ಕಾರದ ಆದೇಶದಂತೆ ಫೆಬ್ರವರಿ-2021 ರಿಂದ ಇದೂವರೆವಿಗೂ ಒಟ್ಟು 9 ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಗ್ರಾಮವಾಸ್ತವ್ಯ ನಡೆಸಲಾಗಿದ್ದು, ಸದರಿ ಕಾರ್ಯಕ್ರಮದಲ್ಲಿ ಈವರೆವಿಗೆ 11983 ಫಲಾನುಭವಿಗಳಿಗೆ ಲಾಭವಾಗಿರುತ್ತದೆ. ಮತ್ತು ಒಟ್ಟು 13133 ಅರ್ಜಿಗಳು ಸ್ವೀಕೃತವಾಗಿದ್ದು, 11697 ಅರ್ಜಿಗಳು ಇತ್ಯರ್ಥವಾಗಿದ್ದು 1436 ಅರ್ಜಿಗಳು ಬಾಕಿ ಇರುತ್ತದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದಲ್ಲಿರುವ ಕ್ರೀಡಾಂಗಣವನ್ನು ರೂ.10.00 ಕೋಟಿಗಳ ವೆಚ್ಛದಲ್ಲಿ ಉನ್ನತೀಕರಿಸಿ ಅತ್ಯುತ್ತಮದರ್ಜೆಯ ಸವಲತ್ತುಗಳನ್ನು ಸಾರ್ವಜನಿಕರಿಗೆ ಒದಗಿಸಲು ಕ್ರಮವಹಿಸಲಾಗುವುದು ಎಂದರು.

ಕೆ.ಆರ್.ಎಸ್. ಹಿನ್ನೀರು ಜಲಸಾಹಸ ಕೇಂದ್ರಕ್ಕೆ ಸಾಹಸ ಕ್ರೀಡಾ ಸಾಮಾಗ್ರಿಗಳು, ಲಭ್ಯಕಟ್ಟಡದ ದುರಸ್ತಿ ಡಾರ್ಮಿಟರಿ ವಿಸ್ತರಣೆ ಕಾಮಗಾರಿಗೆ ರೂ. 1.00 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಜಲಸಾಹಸ ಕೇಂದ್ರ ನಿರ್ಮಾಣಕ್ಕೆ ರೂ. 2.00 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದರು.

ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ 2022-23ನೇ ಸಾಲಿನ U-16 State Championship ಪಂದ್ಯಾವಳಿಯಲ್ಲಿ ಮಂಡ್ಯ ಕ್ರೀಡಾ ವಸತಿ ನಿಲಯದ ಬಾಸ್ಕೆಟ್‍ಬಾಲ್ ತಂಡವು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.

ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು 2022-23ನೇ ಸಾಲಿಗೆ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ ರೂ.1812.80 ಲಕ್ಷಗಳು ನಿಗದಿಯಾಗಿದ್ದು, ಸರ್ಕಾರದಿಂದ ರೂ.1228.23ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ.ಈ ಪೈಕಿ ಸೆಪ್ಟಂಬರ್-2022 ರ ಅಂತ್ಯಕ್ಕೆ ರೂ.487.30ಲಕ್ಷಗಳನ್ನು ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯಕ್ರಮಗಳಿಗೆ ನಿಗದಿಯಾಗಿರುವ ರೂ.1637.63 ಪೈಕಿ ಬಿಡುಗಡೆ ಆಗಿರುವ ರೂ.1246.13 ಲಕ್ಷಗಳ ಪೈಕಿ ಸೆಪ್ಟೆಂಬರ್-2022 ರ ಅಂತ್ಯಕ್ಕೆ ರೂ.368.45ಲಕ್ಷ ವೆಚ್ಚ ಮಾಡಲಾಗಿದೆ.

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಜಿಲ್ಲೆಯಲ್ಲಿ 46 ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳು, 21 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು, 01ಅನುದಾನಿತ ವಿದ್ಯಾರ್ಥಿನಿಲಯಗಳಿರುತ್ತವೆ. ಈ ಸಂಸ್ಥೆಗಳಲ್ಲಿ ಒಟ್ಟು 3905 ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ಅವಕಾಶ ನೀಡಿ ಉಚಿತ ಊಟ, ವಸತಿ ಮತ್ತು ಸಮವಸ್ತ್ರ ವ್ಯವಸ್ಥೆಗಳನ್ನು ಕಲ್ಪಿಸಿ ವ್ಯಾಸಂಗಕ್ಕೆ ಅನುಕೂಲ ಮಾಡಲಾಗಿದೆ. ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗದ ಮಕ್ಕಳಿಗಾಗಿ 01 ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ, 01 ಆಶ್ರಮ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 56 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸಮವಸ್ತ್ರ, ಪಠ್ಯ-ಪುಸ್ತಕ, ಭೋಜನ ವ್ಯವಸ್ಥೆಗಳನ್ನು ಕಲ್ಪಿಸಿ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯ ಸುಧಾರಣೆಗೆ 3 ಕಂತುಗಳಲ್ಲಿ ರೂ.5000 ಗಳನ್ನು ನೀಡಲಾಗುತ್ತಿದ್ದು, 2022-23ನೇ ಸಾಲಿನ ಅಕ್ಟೋಬರ್ ಅಂತ್ಯದವರೆಗೆ 5854 ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗಿದ್ದು ರೂ.401.13 ಲಕ್ಷಗಳ ಪ್ರೋತ್ಸಾಹ ವಿತರಿಸಲಾಗಿದೆ ಎಂದು ತಿಳಿಸಿದರು.

ಅಮೃತ ಸ್ತ್ರೀಶಕ್ತಿ ಕಿರು ಉದ್ದಿಮೆ ಯೋಜನೆಯಡಿ ಜಿಲ್ಲೆಯಲ್ಲಿ ಇಲಾಖೆ ವತಿಯಿಂದ 7211 ಸ್ತ್ರೀಶಕ್ತಿ ಗುಂಪುಗಳು ರಚನೆಯಾಗಿದ್ದು, ಹಾಲಿ ಎಲ್ಲಾ ಗುಂಪುಗಳನ್ನು NRLM ವತಿಯಿಂದ ನಿರ್ವಹಿಸಲಾಗುತ್ತಿದೆ. ಅಮೃತ ಸ್ವತಂತ್ರ ಮಹೋತ್ಸವದ ಪ್ರಯುಕ್ತ ಶ್ರೀಶಕ್ತಿ ಸ್ವ ಸಹಾಯಕ ಗುಂಪುಗಳನ್ನು ಕಿರು ಉದ್ದಿಮೆಗಳನ್ನಾಗಿ ಪರಿವರ್ತಿಸಲು ಜಿಲ್ಲೆಯಲ್ಲಿ 325 ಶಕ್ತಿ ಸಹಾಯಧನ ಗುಂಪುಗಳಿಗೆ ಒಟ್ಟು 325 ಲಕ್ಷ ಗಳ ಬೀಜ ಧನವನ್ನು ನೀಡಲಾಗಿದೆ ಎಂದರು.

ಅಮೃತ ಅಂಗನವಾಡಿ ಕಟ್ಟಡ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ, 25 ಲಕ್ಷ ರೂ ಸಂಪೂರ್ಣ ವೆಚ್ಚ ಭರಿಸಲಾಗಿದೆ.

ಮಂಡ್ಯ ಜಿಲ್ಲೆಯ 233 ಗ್ರಾಮ ಪಂಚಾಯಿತಿಯಲ್ಲಿ 396328 ಮನೆಗಳಿದ್ದು, ಜಲ್ ಜೀವನ್ ಮಿಷನ್ ಯೋಜನೆಯಡಿ 316241 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ ಎಂದರು.

ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಪಾಂಡವಪುರ ತಾಲ್ಲೂಕಿನ 794 ಜನವಸತಿಗಳಿಗೆ ನೀರು ಒದಗಿಸಲು 690.36 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹಾಗೂ ಮಂಡ್ಯ, ಮದ್ದೂರು, ಮಳವಳ್ಳಿ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ 570 ಜನವಸತಿಗಳಿಗೆ ನೀರು ಒದಗಿಸಲು 1091 ಕೋಟಿ ರೂ ವೆಚ್ಚದಲ್ಲಿ 5 ವಿವಿಧ ಕಾಮಗಾರಿಗಳನ್ನು ರೂಪಿಸಲಾಗುತ್ತಿದೆ.

ವಿಶ್ವೇಶ್ವರಯ್ಯ ನಾಲಾ ಜಾಲದ ಆಧುನೀಕರಣ ಕಾಮಗಾರಿಯನ್ನು ಅಂದಾಜು ಮೊತ್ತ ರೂ. 330.48 ಕೋಟಿಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಪೂರಿಗಾಲಿ ಸಮಗ್ರ ಹನಿ / ತುಂತುರು ನೀರಾವರಿ ಯೋಜನೆ ಕಾಮಗಾರಿಯನ್ನು ಅಂದಾಜು ಮೊತ್ತ ರೂ. 593.00 ಕೋಟಿಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆಯ 07 ತಾಲ್ಲೂಕಿನಲ್ಲಿರುವ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ದಿಗಾಗಿ ರೂ.92.89 ಕೋಟಿಗಳಲ್ಲಿ ಒಟ್ಟು 68 ಕಾಮಗಾರಿಗಳು ಮಂಜೂರಾಗಿದ್ದು, ಇವುಗಳನ್ನು 2022-23 ನೇ ಸಾಲಿನಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ ಎಂದರು.

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಮತ್ತು ಕೆಂಪೇಗೌಡ ಥೀಮ್ ಪಾರ್ಕ್ ನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾಗಿದ್ದು, ಪ್ರಧಾನ ಮಂತ್ರಿಗಳು ನವೆಂಬರ್ 1 1 ರಂದು ನಾಡ ಪ್ರಭು ಕೆಂಪೇಗೌಡರ‌ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ ಎಂದರು.

ಕವಾಯತುಗಳು

ಕನ್ನಡ ರಾಜ್ಯೋತ್ಸವ ಅಂಗವಾಗಿ ಕವಾಯತಿನಲ್ಲಿ ಭಾಗವಹಿಸಿದ ತಂಡಗಳಾದಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರೀಕ ಪುರುಷ ಪೊಲೀಸ್ ಪಡೆ,ನಾಗರೀಕ ಮಹಿಳಾ ಪೊಲೀಸ್ ಪಡೆ, ಗೃಹರಕ್ಷಕ ದಳ ಪುರುಷ, ಗೃಹರಕ್ಷಕ ದಳ ಮಹಿಳಾ,ಅಬಕಾರಿ ದಳ, ಎನ್‌.ಸಿ.ಸಿ ಘಟಕ ದಿಂದ ಸರ್ಕಾರಿ ಬಾಲಕರ ಕಾಲೇಜು,ಸರ್ಕಾರಿ ಬಾಲಕಿಯರ ಕಾಲೇಜು,ಪಿಇಎಸ್‌ ಬಾಲಕರ ಕಾಲೇಜು,ಕಾಳೇಗೌಡ ಪ್ರೌಢ ಶಾಲೆ,ಅನಿಕೇತನ ಪ್ರೌಢ ಶಾಲೆ,ಸೈಟ್ಸ್ & ಗೈಡ್ಸ್ ಯಿಂದ ರೋಟರಿ ಪ್ರೌಢ ಶಾಲೆ,ಲಕ್ಷ್ಮೀ ಜನಾರ್ಧನ ಬಾಲಕಿಯರ ತಂಡ,ರೋಟರಿ ಪ್ರೌಢ ಶಾಲೆ
ಬಾಲಕಿಯರ ತಂಡ, ಎಜುಕೇಷನ್‌ ಸೊಸೈಟಿ ಪ್ರೌಢ ಶಾಲೆ, ಡಫೋಡಿಲ್ಸ್ ಪ್ರೌಢ ಶಾಲೆ, ಬಾಲಕರ ತಂಡ ಆದರ್ಶ ಪ್ರೌಢ ಶಾಲೆ,ಸೆಂಟ್ ಜೋಸೆಫ್ ಪ್ರೌಢ ಶಾಲೆ, ಕಾರ್ಮೆಲ್ ಕಾನ್ವೆಂಟ್ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ಭಾಗವಹಿಸಿದರು.

*ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಂಡಗಳು*

ಸೆಂಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಹಚ್ಚೆವು ಕನ್ನಡದ ದೀಪ, ಸದ್ವಿದ್ಯಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಬಂದಿದೆ ಕನ್ನಡ ಬಿರುಸಿನಗಾಳಿ,ಬೇಲೂರಿನಸರ್ಕಾರಿ ಪ್ರೌಢಶಾಲೆ ವಿಧ್ಯಾರ್ಥಿಗಳಿಂದ ಕನ್ನಡ, ನಾಡು, ನುಡಿ ಸಂಸ್ಕೃತಿ,ಮಾಂಡವ್ಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಗೂ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಕಂಸಾಳೆ ಪ್ರಸ್ತುತ ಪಡಿಸಿ ಸಾಂಸ್ಕೃತಿಕ ಕಲೆಯನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ,ನಗರ ಸಭೆ ಅಧ್ಯಕ್ಷ ಹೆಚ್.ಎಸ್.ಮಂಜು, ಉಪಾಧ್ಯಕ್ಷೆ ಇಷ್ರತ್ ಫಾತಿಮಾ,ಸ್ಥಾಯಿ ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಪುಟ್ಟರಾಜು, ಜಿಲ್ಲಾಧಿಕಾರಿ ಡಾ.ಹೆಚ್.ಎನ್. ಗೋಪಾಲಕೃಷ್ಣ, ಜಿ ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಎಲ್. ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್.ನಾಗರಾಜು, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪ ಅರಣ್ಯಸಂರಕ್ಷಣಾಧಿಕಾರಿ ರುದ್ರೆನ್,ಉಪ ವಿಭಾಗಾಧಿಕಾರಿ ಐಶ್ವರ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ