ತಿ.ನರಸೀಪುರ: ಚಿರತೆ ದಾಳಿಯಿಂದ ಮೃತಪಟ್ಟ ತಾಲ್ಲೂಕಿನ ಸೋಸಲೆ ಗ್ರಾಮದ ಮೇಘನಾ ಮನೆಗೆ ಭೇಟಿ ನೀಡಿದ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್ ಅವರು ಮೃತಕುಟುಂಬಸ್ಥರಿಗೆ ಸಾಂತ್ವನ ಹೇಳಿ, ನರಹಂತಕ ಚಿರತೆ ಸೆರೆಹಿಡಿಯುವ ಭರವಸೆ ನೀಡಿದರು.
ನಂತರ ಕಳೆದ ತಿಂಗಳಲ್ಲಿ ಚಿರತೆ ದಾಳಿಗೆ ತುತ್ತಾದ ಎಂ.ಎಲ್. ಹುಂಡಿ ಗ್ರಾಮದ ವಿದ್ಯಾರ್ಥಿ ಮಂಜುನಾಥ್ ಮೃತಪಟ್ಟ ಸ್ಥಳ ಪರಿಶೀಲಿಸಿ ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಉಕ್ಕಲಗೆರೆ ಬೆಟ್ಟ ಸುತ್ತಲೂ ಸ್ಥಳ ಪರಿಶೀಲಿಸುವ, ಕಾರ್ಯಾಚರಣೆ ವೈಖರಿಯ ಬಗ್ಗೆ ವಿವರ ಪಡೆದರು.
ಚಿರತೆಯ ಕಾರ್ಯಕ್ಷೇತ್ರ ಎನ್ನಲಾದ ವಡ್ಗಲ್ ರಂಗನಾಥ ಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯ ಕಾರ್ಯಾಚರಣೆ ವೈಖರಿ ವೀಕ್ಷಿಸಿ ಕೆಲವೊಂದು ಉಪಯುಕ್ತ ಸಲಹೆ ನೀಡಿದರು.
ಅಲ್ಲದೆ ಅರಣ್ಯ ಇಲಾಖೆ ಬೆಟ್ಟದಲ್ಲಿ ಚಿರತೆ ಸೆರೆಹಿಡಿಯಲು ಅಳವಡಿಸಲಾಗಿರುವ ಬೋನು ಮತ್ತು ಕ್ಯಾಮೆರಾಗಳನ್ನು ವೀಕ್ಷಿಸಿ ಚಿರತೆ ಸೆರೆ ಹಿಡಿಯುವ ಸಂಬಂಧ ಸಿಬ್ಬಂದಿಗೆ ಕೆಲ ಮಾಹಿತಿ ನೀಡಿದರಲ್ಲದೆ, ಶೀಘ್ರವಾಗಿ ಚಿರತೆ ಸೆರೆಹಿಡಿಯುವ ಭರವಸೆ ನೀಡಿದರು.
ಸಿಎಫ್‌ಓ ಡಾ. ಮಾಲತಿ ಪ್ರಿಯ, ಡಿಸಿಎಫ್‌ಗಳಾದ ಕಮಲಾ ಕರಿಕಾಳನ್, ಆರ್‌ಎಫ್‌ಓ ಸೈಯದ್ ನದೀಮ್, ಉಪ ವಲಯ ಅರಣ್ಯ ಅಧಿಕಾರಿಗಳಾದ ಮಂಜುನಾಥ್, ಉಮೇಶ್ ಹಾಗೂ ಸಿಬ್ಬಂದಿ ಹಾಜರಿದ್ದರು.





