ಮಡಿಕೇರಿ: ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಬಾಳೆಲೆ, ಶ್ರೀಮಂಗಲ, ವೆಸ್ಟ್ ನೆಮ್ಮೆಲೆ, ಆನ್ ಚೌಕೂರು ಭಾಗದ ತೋಟ ಹಾಗೂ ಗದ್ದೆಗಳಲ್ಲಿ ಕಳೆದ ಕೆಲ ದಿನಗಳಿಂದ ಹುಲಿಯೊಂದು ದಾಳಿ ನಡೆಸುತ್ತಿದ್ದು, ಜನತೆ ಭಯಭೀತರಾಗಿದ್ದಾರೆ.
ಗದ್ದೆಗಳಲ್ಲಿ ಮೇಯಲು ಬಿಡುವ ಹಸುಗಳ ಮೇಲೆ ಹುಲಿ ದಾಳಿ ನಡೆಸುತ್ತಿದ್ದು, ಜಮೀನುಗಳಿಗೆ ತೆರಳಲು ರೈತರು ಹಿಂದೇಟು ಹಾಕುತ್ತಿದ್ದಾರೆ.
ವ್ಯಾಘ್ರ ಕಳೆದ ಎರಡು ತಿಂಗಳಿನಿಂದ ಸುಮಾರು 8 ರಿಂದ 9 ಹಸುಗಳನ್ನು ತಿಂದು ಹಾಕಿದ್ದು, ಜನತೆ ಜೀವಭಯದಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸೆರೆಗೆ ಕಾರ್ಯಾಚರಣೆ ಶುರುಮಾಡಿದ್ದು, ಸಾಕಾನೆಗಳ ಸಹಾಯದಿಂದ ಪ್ರತ್ಯೇಕ ತಂಡ ಕಟ್ಟಿಕೊಂಡು ಹುಲಿಗಾಗಿ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದಾರೆ.
ಈ ಹುಲಿಯು ಗಾತ್ರದಲ್ಲಿ ಸಣ್ಣದಾಗಿರುವ ಗಂಡು ಹುಲಿ ಎಂದು ಕ್ಯಾಮರಾಗಳಿಂದ ತಿಳಿದುಬಂದಿದ್ದು, ಹುಲಿ ಸೆರೆ ಹಿಡಿಯುವವರೆಗೂ ಜನತೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.