ಪತ್ನಿ ಹತ್ಯೆ ಮಾಡಿದ ಪತಿಯ ಬಂಧನ
ಮಡಿಕೇರಿ : ಪತಿಯೊಬ್ಬ ತನ್ನ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಕುಶಾಲನಗರ ತಾಲ್ಲೂಕಿನ ಕೊಡಗರಹಳ್ಳಿ ಸಮೀಪದ ಅಂದಗೋವೆ ಗ್ರಾಮದಲ್ಲಿ ನಡೆದಿದೆ.
ಅಂದಗೋವೆ ಗ್ರಾಮದ ಖಾಸಗಿ ಎಸ್ಟೇಟ್ ನ ಲೈನ್ ಮನೆಯಲ್ಲಿ ವಾಸವಿದ್ದ ಪತಿ ಮುತ್ತ(50) ಆರೋಪಿಯಾಗಿದ್ದು, ಪತ್ನಿ ಲತಾ(45) ಹತ್ಯೆಯಾದ ಮಹಿಳೆ.
ಭಾನುವಾರ ಪತಿ ಪತ್ನಿ ನಡುವೆ ಕಲಹ ಏರ್ಪಟ್ಟಿದೆ ಎನ್ನಲಾಗಿದ್ದು, ಈ ಸಂದರ್ಭ ಪತಿ ಮುತ್ತ ತನ್ನ ಪತ್ನಿ ಲತಾ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಸೋಮವಾರ ಸಂಜೆ ಘಟನೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಸುಂಟಿಕೊಪ್ಪ ಹಾಗೂ ಕುಶಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಮುತ್ತನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಭೇಟಿ ನೀಡಿ ಪರಿಶೀಲಿಸಿದರು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





