ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ನಿಯಂತ್ರಣಕ್ಕೆ ಬಂದಿದ್ದರೂ ವಿರಾಜಪೇಟೆ ಭಾಗದಲ್ಲಿ ಮಳೆ ಮತ್ತೆ ಬಿರುಸಿನಿಂದ ಸುರಿದಿದ್ದು, ರಸ್ತೆ ಕುಸಿತದ ಭೀತಿ ಎದುರಾಗಿದೆ.
ವಿರಾಜಪೇಟೆ-ಕರಡ ಜಿಲ್ಲಾ ಮುಖ್ಯ ರಸ್ತೆಯ ತೆರಮೆಮೊಟ್ಟೆಯ ಬಳಿ ರಸ್ತೆಯ ಒಂದು ಬದಿ ಕುಸಿಯುವ ಹಂತದಲ್ಲಿದೆ. ಹೀಗಾಗಿ ಜಿಲ್ಲಾಡಳಿತ ಇಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಿ, ಸಂಚಾರಕ್ಕೆ ಬದಲಿ ಮಾರ್ಗವನ್ನು ಸೂಚಿಸಿದೆ.
ಇನ್ನೂ ಕೊಡಗು ಜಿಲ್ಲೆಯಾದ್ಯಂತ ತುಂತುರು ಮಳೆಯಾಗುತ್ತಿದ್ದು, ಮಳೆಗೆ ಚಳಿಯ ವಾತಾವರಣ ನಿರ್ಮಾಣವಾಗಿದೆ.
ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಗುಡ್ಡ ಕುಸಿಯುವ ಆತಂಕ ಮನೆಮಾಡಿದೆ.
ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಸಂತ್ರಸ್ತರ ಜೊತೆ ನಿಂತಿದ್ದು, ಪ್ರವಾಹ ಹಾಗೂ ಮಳೆ ಭೀತಿ ಎದುರಿಸಲು ಸರ್ವ ರೀತಿಯಲ್ಲೂ ತಯಾರು ನಡೆಸಿದೆ.