ಮಡಿಕೇರಿ : ಹೃದಯಾಘಾತದಿಂದ ಮಡಿಕೇರಿಯ ಡಿಎಆರ್‌ನ ಮುಖ್ಯ ಪೇದೆಯೊಬ್ಬರು ಸಾವಿಗೀಡಾಗಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ನಡೆದಿದೆ.
ಮೂಲತಃ ಚಾಮರಾಜನಗರ ಜಿಲ್ಲೆಯವರಾಗಿದ್ದು, ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ಎನ್.ವಿಜಯ್ (47) ಎಂಬವರೆ ಮೃತಪಟ್ಟವರು. ವಿಜಯ್ ಕಳೆದ ಹಲವು ವರ್ಷಗಳಿಂದ ಮಡಿಕೇರಿಯ ಡಿಎಆರ್‌ನಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿಜಯ್ ಪೊಲೀಸ್ ಬ್ಯಾಂಡ್ ಮನ್ ಆಗಿಯೂ ಕೆಲಸ ಮಾಡುತ್ತಿದ್ದರು. ಹಲವು ವರ್ಷಗಳಿಂದ ಮಡಿಕೇರಿ ಮೈತ್ರಿ ಹಾಲ್‌ನ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದರು.
ಬುಧವಾರ ರಾತ್ರಿ ವಿಜಯ್‌ಗೆ ಏಕಾಏಕಿ ಎದೆನೋವು ಕಾಣಿಕೊಂಡಿದೆ ಎನ್ನಲಾಗಿದ್ದು, ಪತ್ನಿಯ ಬಳಿ ಬಿಸಿನೀರು ಕೇಳಿ ಕುಡಿದಿದ್ದಾರೆ. ಬಳಿಕ ಮಲಗಿದ್ದವರು ಅಸ್ವಸ್ಥಗೊಂಡಿದ್ದರು ಎನ್ನಲಾಗಿದ್ದು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಯಾವುದೇ ಪ್ರಯೋಜವಾಗಿಲ್ಲ.
ವಿಜಯ್ ಅವರ ಮೃತದೇಹವನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ಶವಗಾರ ರವಾನಿಸಲಾಗಿತ್ತು. ಶವಗಾರಕ್ಕೆ ಕೊಡಗು ಎಸ್ಪಿ ರಾಮರಾಜನ್ ಸೇರಿದಂತೆ ಹಿರಿಯ ಅಧಿಕಾರಿಗಳು, ಸಿಂಬಂಧಿ ಆಸ್ಪತ್ರೆಗೆ ಆಗಮಿಸಿ ಸಂತಾಪ ಸೂಚಿಸಿದರು.
ವಿಜಯ್ ಮೃತದೇಹಕ್ಕೆ ಮಡಿಕೇರಿಯಲ್ಲಿ ಸರ್ಕಾರಿ ಗೌರವ ಸೂಚಿಸಿದ ಬಳಿಕ ಮಡಿಕೇರಿಯಿಂದ ಹುಟ್ಟೂರಿಗೆ ಕಳುಹಿಸಿಕೊಡಲಾಯಿತು. ಮೃತ ವಿಜಯ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.





