ಕೊಡಗು: ವ್ಯಕ್ತಿಯೋರ್ವನ ಮೇಲೆ ನಾಲ್ವರು ಹಲ್ಲೆ ಮಾಡಿ ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣದಲ್ಲಿ ನಡೆದಿದೆ.
ಅಲ್ಲಿನ ನಿವಾಸಿ ಎಂ. ಮಂಜುನಾಥ ಎಂಬುವವರು ಮನೆಯಲ್ಲಿ ಒಬ್ಬರೇ ಇದ್ದ ಸಮಯ ಸಾಧಿಸಿ, ಪಕ್ಕದ ಮನೆಯಲ್ಲಿ ವಾಸವಿದ್ದ ಅವರ ತಂಗಿ ಜಾನಕಿ ಮತ್ತು ಆಕೆಯ ಮಕ್ಕಳಾದ ಸುಜಿತ್, ಸುಜೇಶ್ ಹಾಗೂ ಸಂದೀಪ್ ಎಂಬುವವರು ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ.
ಆರೋಪಿಗಳ ಪೈಕಿ ಸುಜಿತ್ ಎಂಬಾತ ಕತ್ತಿಯಿಂದ ಮಂಜುನಾಥ್ ತಲೆಗೆ ಮತ್ತು ಕಾಲಿಗೆ ಕಡಿದಿದ್ದಾರೆ. ನಂತರ ಗಾಯಳುವನ್ನು ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಹಿಂದೆಯೂ ಕೂಡ ಇವರುಗಳ ನಡುವೆ ಆಸ್ತಿ ವಿಚಾರದಲ್ಲಿ ಕಲಹ ಏರ್ಪಟ್ಟಿತ್ತು ಎಂದು ಹೇಳಲಾಗಿದೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.