ಕೊಡಗು: ಜಿಲ್ಲೆಯ ಏಕೈಕ ನೀರು ಸಂಗ್ರಹಣಾ ಜಲಾಶಯವಾಗಿರುವ ಹಾರಂಗಿ ಜಲಾಶಯಕ್ಕೆ ಈಗ ಆತಂಕ ಎದುರಾಗಿದೆ. ಜಿಲ್ಲೆಯ ಸಾವಿರಾರು ಎಕರೆ ಕೃಷಿಗೆ ನೀರು ಕೊಡುವ ಏಕೈಕ ಅಣೆಕಟ್ಟು ಇದಾಗಿದ್ದು, ಇಂದು ಇಂತಹ ಡ್ಯಾಂ ಗೂ ಕೂಡಾ ಕಂಟಕ ಎದುರಾಗಿದೆ.
ಡ್ಯಾಂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಟ್ಟ ಕೊರೆದು ಕಲ್ಲು ಗಣಿಗಾರಿಕೆ ಮಾಡುವ ಮೂಲಕ ಪರೋಕ್ಷವಾಗಿ ಡ್ಯಾಂಗೆ ತೊಂದರೆ ಉಂಟಾಗುತ್ತಿದೆ. 1982 ರಲ್ಲಿ ಉದ್ಘಾಟನೆಯಾದ 162ಅಡಿ ಎತ್ತರದ (8.50 TMC ಸಾಮರ್ಥ್ಯ) 2775.8 ಉದ್ದವಿರುವ ಅಣೆಕಟ್ಟು ಇಂದು ಕೆಆರ್‌ಎಸ್ ಜಲಾಶಯದ ರೀತಿಯಲ್ಲಿ ತೊಂದರೆಗೆ ಸಿಲುಕಲಿದೆ.
ಸೋಮವಾರ ಪೇಟೆ ತಾಲ್ಲೂಕಿನ ಹೊಸಳ್ಳಿ ವ್ಯಾಪ್ತಿಯ ಮತ್ತು ಕುಶಾಲನಗರ ನಗರ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಯುವ ಮೂಲಕ ಪ್ರಕೃತಿ ಸಂಪತ್ತು ನಾಶವಾಗುತ್ತ ಬರತ್ತಿದ್ದು, ಇದರಿಂದ ಡ್ಯಾಂನ ಭದ್ರತೆಗೆ ಹೆಚ್ಚಿನ ಪೆಟ್ಟು ಬೀಳಲಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸರ್ಕಾರದ, ಜಿಲ್ಲಾಡಳಿತದ ಎಲ್ಲಾ NOC ಮತ್ತು ಅನುಮತಿ ಪಡೆದು ನಡೆಯುತ್ತಿರುವ ಗಣಿಗಾರಿಕೆಯಾಗಿದ್ದು, ಆರಣ್ಯವ್ಯಾಪ್ತಿಯಲ್ಲಿ ಬಫೋರ್ ಜೋನ್ ಬಿಡದೆ ನಡೆಯುತ್ತಿದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಬೇಸರದ ಸಂಗತಿಯಾಗಿದೆ.
100 ಅಡಿಗೂ ಹೆಚ್ಚು ಆಳದಲ್ಲಿ ಬಂಡೆ ಸಿಡಿಸಿ, ಭೂಮಿ ಕೊರೆದು ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಡ್ಯಾಂಗೆ ತೊಂದರೆಯಗಲಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಕೆಆರ್‌ಎಸ್ ಅಣೆಕಟ್ಟಿನ ಸುತ್ತಮುತ್ತಲಿನ 20 ಕಿಲೋಮೀಟರ್ ದೂರದಲ್ಲಿ ಕಲ್ಲು ಗಣಿಗಾರಿಕೆ ನಡೆಸದಂತೆ ಕೋರ್ಟ್ ಆದೇಶ ಹೊರಡಿಸಿರುವ ರೀತಿಯಲ್ಲಿಯೇ ಹಾರಂಗಿ ಸುತಮುತ್ತಲಿನಲ್ಲಿ ಕಲ್ಲು ಗಣಿಗಾರಿಕೆ ತಡೆಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇನ್ನು ಈ ಡ್ಯಾಂ ಒಂದು ವೇಳೆ ಹಾನಿಗೆ ಒಳಗಾದಲ್ಲಿ ಅಕ್ಕಪಕ್ಕದ ಮೂರ್ನಾಲ್ಕು ಗ್ರಾಮಗಳು ಮುಳುಗಲಿದೆ. ಹಾಗೂ ಅಪಾರ ಪ್ರಮಾಣದ ಅಸ್ತಪಾಸ್ತಿಗೆ ಕೆಡುಕಾಗಲಿದೆ ಎಂದು ಸ್ಥಳೀಯರು ಬೇಸರ ಹೊರಹಾಕಿದ್ದಾರೆ.