ಸುಂಟಿಕೊಪ್ಪ: ಮೀನು ಹಿಡಿಯಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹೊಸತೋಟ ಬಳಿಯ ಗರಗಂದೂರಿನಲ್ಲಿ ನಡೆದಿದೆ.
ಸೋಮವಾರಪೇಟೆ ಬಳಿಯ ನಗರೂರು ಗ್ರಾಮದ ಯೋಗೇಶ್(೨೫) ಎಂಬಾತನೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ದೈವಿಯಾಗಿದ್ದಾನೆ.
ಗರಗಂದೂರಿನಲ್ಲಿ ತೋಟದ ಕೆಲಸಕ್ಕೆ ತೆರಳಿದ್ದ ಯೋಗೇಶ್ ಮತ್ತು ಆತನ ಸ್ನೇಹಿತ ಪ್ರದೀಪ್ ಎಂಬುವವರು ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಗರಗಂದೂರಿನ ಹಾರಂಗಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ.
ಯೋಗೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.