ಮಡಿಕೇರಿ: ಪೊಲೀಸ್ ಪೇದೆ ಓರ್ವ ತನ್ನ ಪ್ರೇಯಸಿಯ ಪತಿಯನ್ನು ಹತ್ಯೆ ಮಾಡಲು ಯತ್ನಿಸಿರುವ ಘಟನೆ ಶನಿವಾರಸಂತೆಯಲ್ಲಿ ನಡೆದಿದೆ.
ಕೊಲೆ ಮಾಡಲು ಯತ್ನಿಸಿದ್ದ ಪೊಲೀಸ್ ಪೇದೆ ಕೊಟ್ರೇಶ್(30) ಮತ್ತು ಕೊಲೆ ಯತ್ನಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಆತನ ಪ್ರಿಯತಮೆ ಆಯಿಷಾ (29) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರಸಂತೆ ನಿವಾಸಿ ಇಫ್ರಾಜ್ ಎಂಬುವವರು ಆರು ವರ್ಷದ ಹಿಂದೆ ಆಯಿಷಾಳನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ವರ್ಷದ ಮಗು ಇದೆ. ದಂಪತಿ ಮಧ್ಯೆ ಆಗಾಗ್ಗೆ ಜಗಳವಾಗಿ ಹಲವು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.
ಪೊಲೀಸ್ ಪೇದೆ ಕೊಟ್ರೇಶ್ ಶನಿವಾರಸಂತೆ ಠಾಣೆಯಲ್ಲಿ ಕರ್ತವ್ಯದಲ್ಲಿದ್ದು, ತನ್ನ
ಪ್ರೇಯಸಿ ಆಯಿಷಾಳ ಪಕ್ಕದ ಮನೆಯಲ್ಲಿ ವಾಸವಾಗಿದ್ದಾನೆ. ಆಯಿಷಾಳು ಕೊಟ್ರೇಶ್ನನ್ನು ಮಂಗಳವಾರ ಮಧ್ಯರಾತ್ರಿ ಮನೆಗೆ ಕರೆಸಿದ್ದಾಳೆ. ಬಳಿಕ ಕೊಟ್ರೇಶ್ ದಿಂಬಿನಿಂದ ಉಸಿರುಗಟ್ಟಿಸಿ ಆಯಿಷಾಳ ಪತಿ ಇಫ್ರಾಜ್ರನ್ನು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಹೇಳಲಾಗಿದೆ.
ಪಕ್ಕದ ಕೋಣೆಯಲ್ಲಿ ಮಲಗಿದ್ದ ಇಫ್ರಾಜ್ ಅವರ ಅಕ್ಕನ ಮಗ ನೆರವಿಗೆ ಧಾವಿಸಿ ಬಂದು ಇಫ್ರಾಜ್ರ ಜೀವ ಉಳಿಸಿದ್ದಾರೆ. ಈ ಸಂದರ್ಭ ಆಯಿಷಾ ಮತ್ತು ಕೊಟ್ರೇಶ್ ನಡುವಿನ ಅಕ್ರಮ ಸಂಬಂಧ ಬಟಾ ಬಯಲಾಗಿದೆ.
ಮೊದಲು ಆರೋಪಿ ಕೋಟ್ರೆಶನ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದರಿಂದ ಇಫ್ರಾಜ್ ಅವರು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ. ನಂತರ ಅವರ ಸೂಚನೆ ಮೇರೆಗೆ ಎಫ್ಐಆರ್ ದಾಖಲಾಗಿದ್ದು, ಆರೋಪಿ ಕೊಟ್ರೇಶ್ನನ್ನು ಬಂಧಿಸಲಾಗಿದೆ.





