ಕೊಡಗು: ಇಲ್ಲಿನ ವಿಶ್ವವಿದ್ಯಾನಿಲಯ ಮುಚ್ಚುವ ಸರ್ಕಾರದ ನಿರ್ಧಾರ ಖಂಡನೀಯ ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಕಿಡಿಕಾರಿದ್ದಾರೆ.
ಈ ಕುರಿತು ಮಡಿಕೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸ್ಥಾಪನೆ ಮಾಡಿರುವ 9 ವಿಶ್ವವಿದ್ಯಾನಿಲಯಗಳನ್ನು ಕಾಂಗ್ರೆಸ್ ಸರ್ಕಾರ ಮುಚ್ಚುವ ತೀರ್ಮಾನ ಕೈಗೊಳ್ಳುತ್ತಿರುವುದು ಖಂಡನೀಯ. ಕೊಡಗು ವಿಶ್ವವಿದ್ಯಾನಿಲಯಕ್ಕೆ ಕನಿಷ್ಠ ಎರಡು ಕೋಟಿ ರೂಪಾಯಿ ಅನುದಾನ ಕೂಡ ನೀಡಲು ಅಸಾಧ್ಯವಾದ ಸ್ಥಿತಿಗೆ ಕಾಂಗ್ರೆಸ್ ಸರ್ಕಾರ ತಲುಪಿರೋದು ಖಂಡನೀಯ. ಸರ್ಕಾರಕ್ಕೆ ವಿಶ್ವವಿದ್ಯಾನಿಲಯ ನಡೆಸಲು ಅನುದಾನ ಇಲ್ಲದೆ ಹೋದಲ್ಲಿ ಕೊಡಗಿನ ಜನತೆಯ ನೆರವಿನೊಂದಿಗೆ ಖಾಸಗಿ ಸಂಸ್ಥೆಗಳ ಅನುದಾನ ಬಳಸಿ ಕೊಡಗು ವಿಶ್ವವಿದ್ಯಾನಿಲಯವನ್ನು ಬಿಜೆಪಿ ಉಳಿಸಿಕೊಳ್ಳಲಿದೆ ಎಂದರು.
ಇನ್ನು ಕೊಡಗು ವಿಶ್ವವಿದ್ಯಾನಿಲಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾನು ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್ ಪೊನ್ನಣ್ಣ ಅವರ ಜೊತೆ ಕೂಡ ಚರ್ಚಿಸಿದ್ದೇನೆ. ಕೊಡಗು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಬೋಧಕ ವರ್ಗಕ್ಕೆ ಯಾವುದೇ ಸಮಸ್ಯೆ ಆಗದಂತೆ ವಿಶ್ವವಿದ್ಯಾನಿಲಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.