ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಜೂನ್ ತಿಂಗಳಿನಲ್ಲಿ ಅತೀ ಕಡಿಮೆ ಮಳೆಯಾಗಿದೆ. ಪರಿಣಾಮ ಹಾರಂಗಿ ಜಲಾಶಯ, ಕೆರೆ, ಸೇರಿದಂತೆ ನೀರಿನ ಮೂಲಗಳು ಇನ್ನು ಖಾಲಿ ಖಾಲಿಯಾಗಿದ್ದು, ಮಳೆಯಾಶ್ರಿತ ರೈತರಿಗೆ ಸಂಕಷ್ಟ ಉಂಟಾಗಿದೆ.
ಜೂನ್ ಮುಗಿದರೂ ಈ ಬಾರಿ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 356.90 ಮಿ.ಮೀ ಮಾತ್ರ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 690.35 ಮಿ.ಮೀ ಮಳೆಯಾಗಿತ್ತು. ಜಿಲ್ಲೆಯಲ್ಲಿ ಮಳೆ ಚುರುಕು ಪಡೆಯುತ್ತಿದ್ದರೂ ವಾಡಿಕೆ ಮಳೆಯ ಕೊರತೆಯಿಂದ ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿಯಲ್ಲಿ ನೀರಿನ ಮಟ್ಟ ಕುಸಿದಿದೆ. ಇದರಿಂದ ಹಾರಂಗಿ ಜಲಾನಯನ ಪ್ರದೇಶದ ರೈತರು ಹಾಗೂ ಕುಡಿಯಲು ಹಾರಂಗಿ ನೀರನ್ನೇ ಅವಲಂಬಿಸಿರುವ ಜನರಿಗೆ ಸಂಕಷ್ಟ ಎದುರಾಗುವಂತಿದೆ.