ಕೊಡಗು: ಕೊಡಗು ಜಿಲ್ಲೆಯಲ್ಲಿ ಭಾರೀ ಗಾಳಿ, ಮಳೆಯಾದ ಪರಿಣಾಮ ಈ ವರ್ಷ ಚೆಸ್ಕಾಂಗೆ ಭಾರೀ ನಷ್ಟ ಉಂಟಾಗಿದೆ.
ಕಳೆದ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು, ಕಾವೇರಿ ನದಿ ಪ್ರವಾಹದ ರೂಪ ಪಡೆದಿತ್ತು.
ಮಳೆಗಿಂತ ಮುಖ್ಯವಾಗಿ ಭೀಕರ ಗಾಳಿ ಬೀಸಿದ್ದ ಪರಿಣಾಮ ಸಾವಿರಾರು ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದವು. ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿ ಬಿದ್ದ ಪರಿಣಾಮ ಜಿಲ್ಲೆಯಲ್ಲಿ ಸುಮಾರು 3077 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದವು.
ಇದರ ಜೊತೆಗೆ 150 ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿವೆ ಎಂದು ಸ್ವತಃ ಚೆಸ್ಕಾಂ ಅಧಿಕಾರಿಗಳೇ ಮಾಹಿತಿ ನೀಡಿದ್ದು, ಇದರಿಂದ ಇಲಾಖೆಗೆ 4.83 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಕೊಡಗು ಜಿಲ್ಲೆಯಲ್ಲಿ ಈ ತಿಂಗಳು ಕೂಡ ಮಳೆ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿದ್ದು, ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.
ಇನ್ನು ಈ ವರ್ಷಕ್ಕೆ ನೋಡಿದರೆ, ಕಳೆದ ವರ್ಷ ವಿದ್ಯುತ್ ಇಲಾಖೆಗೆ ಹೆಚ್ಚೇನೋ ನಷ್ಟವಾಗಿರಲಿಲ್ಲ. ಆದರೆ ಈ ಬಾರಿ ಜುಲೈ ಹಾಗೂ ಆಗಸ್ಟ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಅಪಾರ ನಷ್ಟವಾಗಿದೆ.
ಇದರ ಜೊತೆ ಜೊತೆಗೆ ಬೆಟ್ಟ-ಗುಡ್ಡಗಳಲ್ಲಿ ವಾಸಿಸುತ್ತಿರುವ ಜನರಿಗೆ ಕಡಿತವಾಗಿರುವ ವಿದ್ಯುತ್ ಸಂಪರ್ಕವನ್ನು ಸರಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಕೊಡಗು ಜಿಲ್ಲೆ ಸದ್ಯದ ಮಟ್ಟಿಗೆ ಸಹಜ ಸ್ಥಿತಿಯಲ್ಲಿದೆ.
ಒಂದು ವೇಳೆ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈ ತಿಂಗಳು ಕೂಡ ಮಳೆ ಮುಂದುವರಿದರೆ, ಮತ್ತೆ ಅದೇ ಸ್ಥಿತಿ ಬರಲಿದೆ ಎನ್ನಲಾಗಿದ್ದು, ಜನತೆ ಬಹಳ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.