Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮಳೆಗಾಲದಲ್ಲಿ ಕೊಡಗು ಜನತೆಯ ಬದುಕು ಹೇಗಿದೆ ಗೊತ್ತಾ.?

ಕೊಡಗು: ಮಳೆಗಾಲ ಎಂದಾಕ್ಷಣ ಕೊಡಗಿನ ಜನರಲ್ಲಿ ನಡುಕ ಹುಟ್ಟುತ್ತದೆ. ತೋಟದ ನಡುವೆ, ನದಿ ತಟದ ಪ್ರದೇಶಗಳಲ್ಲಿ, ಬೆಟ್ಟಗುಡ್ಡಗಳ ತಪ್ಪಲಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸುವವರೆಲ್ಲರೂ ಭಯದಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಂದಿನ ಕಾಲದಲ್ಲಿ ಸುರಿಯುತ್ತಿದ್ದ ಮಳೆಗೂ ಈಗ ಸುರಿಯುವ ಮಳೆಗೂ ಭಾರೀ ವ್ಯತ್ಯಾಸ ಕಾಣುತ್ತಿದೆ. ಮೊದಲೆಲ್ಲಾ ಜಿಟಿ ಜಿಟಿ ಸುರಿಯುತ್ತಾ ಮಳೆ ವೇಗ ಪಡೆದುಕೊಳ್ಳುತ್ತಿತ್ತು. ಜುಲೈ ತಿಂಗಳ ಹೊತ್ತಿಗೆ ಎಲ್ಲೆಂದರಲ್ಲಿ ಅಂತರ್ಜಲಗಳು ಹೆಚ್ಚಾಗಿ ನೀರಾಗಿ ಹರಿಯಲಾರಂಭಿಸುತ್ತಿದ್ದವು. ಇದರಿಂದ ಮಳೆ ಕಡಿಮೆಯಾದರೂ ಜಲ ನೀರು ನದಿಗಳನ್ನು ಸೇರುತ್ತಿದ್ದರಿಂದ ನದಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರಲಿಲ್ಲ. ಆದರೆ ಈಗ ಒಮ್ಮೆಲೆ ಮಳೆ ಸುರಿದಾಗ ನೀರು ಕೂಡ ಎಲ್ಲೆಂದರಲ್ಲಿ ಹರಿದು ಬರುತ್ತದೆ. ಮಳೆ ಕಡಿಮೆಯಾಗುತ್ತಿದ್ದಂತೆಯೇ ನದಿಗಳಲ್ಲಿ ನೀರಿನ ಪ್ರಮಾಣವು ಕಡಿಮೆಯಾಗಿ ಬಿಡುತ್ತಿದೆ.

ಇನ್ನು ಮಳೆಗಾಲದಲ್ಲಿ ರಸ್ತೆಗಳು ಕೆಸರುಮಯವಾಗಿ ಓಡಾಡುವುದೇ ಕಷ್ಟವಾಗುತ್ತದೆ. ಇದರ ಜೊತೆಗೆ ಬೆಟ್ಟಗುಡ್ಡ, ಕಂದಕಗಳಲ್ಲಿ ಮನೆ ಮಾಡಿಕೊಂಡಿರುವ ಸ್ಥಳಗಳಿಗೆ ವಾಹನಗಳೇ ತೆರಳುವುದಿಲ್ಲ. ಕೆಲವು ಕಡೆಗಳಲ್ಲಿ ನದಿ ತುಂಬಿ ಹರಿದಾಗ ಸಂಪರ್ಕವೇ ಕಡಿತಗೊಳ್ಳುತ್ತದೆ. ಆಗಾಗ್ಗೆ ಮರಗಳು ಬೀಳುವುದು, ವಿದ್ಯುತ್‌ ಕಂಬಗಳು ಮುರಿಯುವುದು ಹೀಗೆ ಹಲವು ಸಮಸ್ಯೆಗಳಿಂದಾಗಿ ವಿದ್ಯುತ್‌ ಕೈಕೊಡುತ್ತದೆ. ಮಳೆಯಲ್ಲಿಯೇ ಗದ್ದೆ ತೋಟಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ. ಹೀಗೆ ಹತ್ತಾರು ಜಂಜಾಟಗಳ ನಡುವೆ ಇಲ್ಲಿನವರ ಬದುಕು ಸಾಗುತ್ತದೆ.

ಇದೆಲ್ಲದರ ನಡುವೆ ಕೊಡಗಿನ ಮಳೆಗಾಲ ಮತ್ತು ಮಳೆಗಾಲದಲ್ಲಿ ಆಚರಿಸಲ್ಪಡುವ ಆಚರಣೆಗಳು, ತಿನಿಸುಗಳು, ಕೃಷಿ ಚಟುವಟಿಕೆ ಎಲ್ಲವೂ ಭಿನ್ನವಾಗಿರುತ್ತವೆ. ಬಹುಶಃ ಇಲ್ಲಿನವರು ಮಳೆಗಾಲದಲ್ಲಿ ಏನೇ ಸಂಕಷ್ಟ ಅನುಭವಿಸಿದರೂ ಅದರಾಚೆಗೆ ಮಳೆಗಾಲವನ್ನು ಧೈರ್ಯವಾಗಿ ಮತ್ತು ಖುಷಿಯಿಂದಲೇ ಎದುರಿಸುತ್ತಾರೆ.

ಇನ್ನೂ ಮಳೆಗಾಲದಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಿಗುವ ಗಿಡಮೂಲಿಕೆಗಳನ್ನು ಬಳಸಿ ಆಹಾರ ಪದಾರ್ಥಗಳನ್ನು ತಯಾರಿಸಿ ಮನೆಮಂದಿಯೆಲ್ಲಾ ಸೇವಿಸುತ್ತಾರೆ. ಈ ನಡುವೆ ಮಳೆಗಾಲದಲ್ಲಿಯೇ ಇಲ್ಲಿ ಭತ್ತದ ಕೃಷಿ ಆರಂಭವಾಗುತ್ತದೆ. ಬೆಳಿಗ್ಗೆಯಿಂದ ರಾತ್ರಿವರೆಗೂ ಮಳೆ ನಡುವೆ ಕೆಸರು ನೀರು ತುಂಬಿದ ಗದ್ದೆಯಲ್ಲಿ ಸೊಂಟ ಬಗ್ಗಿಸಿ ನಾಟಿ ನೆಡುವುದು ಸುಲಭದ ಕೆಲಸವಲ್ಲ. ಅದನ್ನು ಮಾಡಬೇಕಾದರೆ ದೈಹಿಕವಾಗಿ ಶಕ್ತಿಬೇಕು. ಇಂತಹ ಶಕ್ತಿಯನ್ನು ಇಲ್ಲಿ ಸ್ಥಳೀಯ ಆಹಾರಗಳು ನೀಡುತ್ತವೆ.

 

Tags: