ಮಡಿಕೇರಿ: ಹೆಸರುವಾಸಿ ಪ್ರವಾಸಿತಾಣ ಮಡಿಕೇರಿ ನಗರದ ರಾಜಾಸೀಟು ಉದ್ಯಾನವನದಲ್ಲಿ ಗಾಜಿನ ಸೇತುವೆ ನಿರ್ಮಿಸುವ ಯೋಜನೆ ಪರಿಸರಕ್ಕೆ ಮತ್ತು ಜನರ ನೆಮ್ಮದಿಗೆ ಮಾರಕವಾಗಿದ್ದು, ಇದನ್ನು ತಕ್ಷಣ ಕೈಬಿಡಬೇಕೆಂದು ಆಮ್ ಆದ್ಮಿ ಪಾರ್ಟಿಯ ಕೊಡಗು ಘಟಕ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ.ಪೃಥ್ವಿ, ಪ್ರಕೃತಿದತ್ತವಾದ ರಾಜಾಸೀಟು ಉದ್ಯಾನವನವನ್ನು ಈಗಾಗಲೇ ಕಾಂಕ್ರಿಟೀಕರಣಗೊಳಿಸಿ ನೈಜತೆಗೆ ದಕ್ಕೆ ತರಲಾಗಿದೆ. ಇದೀಗ ಗಾಜಿನ ಸೇತುವೆ ನಿರ್ಮಿಸುವ ಕುರಿತು ಯೋಜನೆ ರೂಪಿಸಿರುವ ವಿಚಾರ ಬೆಳಕಿಗೆ ಬಂದಿದ್ದು, ಇದನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದ್ದಾರೆ.
ಯೋಜನೆಯ ಕುರಿತು ಯಾರ ಗಮನಕ್ಕೂ ತಾರದೆ ಮತ್ತು ಜನಾಭಿಪ್ರಾಯ ಸಂಗ್ರಹಿಸದೆ ಏಕಾಏಕಿ ಗಾಜಿನ ಸೇತುವೆ ನಿರ್ಮಿಸಲು ಮುಂದಾಗಿರುವುದು ನಿಯಮಬಾಹಿರ ಕ್ರಮವಾಗಿದೆ. ಗಾಜಿನ ಸೇತುವೆ ಪ್ರಕೃತಿ ಸೌಂದರ್ಯದ ರಾಜಾಸೀಟು ಉದ್ಯಾನವನಕ್ಕೆ ಮಾರಕವಾಗಿದೆ. ಪ್ರಸ್ತುತ ಸಾವಿರಾರು ಪ್ರವಾಸಿಗರಿಂದ ತುಂಬಿ ಹೋಗುತ್ತಿರುವ ರಾಜಾಸೀಟು ವ್ಯಾಪ್ತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಜನರು ಪರದಾಡುವ ಪರಿಸ್ಥಿತಿ ಇದೆ.
ಗಾಜಿನ ಸೇತುವೆಯಂತಹ ಪ್ರಕೃತಿಗೆ ವಿರುದ್ಧವಾದ ಯೋಜನೆ ಅನುಷ್ಠಾನಗೊಂಡರೆ ಪ್ರವಾಸಿಗರ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆಗಳಿದೆ. ಇದರಿಂದ ಸುತ್ತಮುತ್ತಲ ಪರಿಸರ ಮಾಲಿನ್ಯವಾಗುವುದಲ್ಲದೆ ಅಪಾಯಕ್ಕೂ ಆಹ್ವಾನ ನೀಡಿದಂತ್ತಾಗುತ್ತದೆ. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ ನಡೆಯುತ್ತಿರುವ ಕಾಮಗಾರಿಗಳೆಲ್ಲವೂ ಕಳಪೆ ಗುಣಮಟ್ಟದಿಂದ ಕೂಡಿದ್ದು, ಮುಂದೆ ಈ ಗಾಜಿನ ಸೇತುವೆ ಕೂಡ ಕಳಪೆಯಾದರೆ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಅಪಾಯ ತಪ್ಪಿದ್ದಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪರಿಸರಸ್ನೇಹಿ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ ರಾಜಾಸೀಟು ಉದ್ಯಾನವನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿರುವ ಹೆಚ್.ಬಿ.ಪೃಥ್ವಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಅಭಿವೃದ್ಧಿಯ ಬಗ್ಗೆ ಅಷ್ಟು ಕಾಳಜಿ ಇದ್ದರೆ ನಗರದಲ್ಲಿ ಸುಸಜ್ಜಿತ ವಾಹನ ಪಾರ್ಕಿಂಗ್ ಸಂಕೀರ್ಣವನ್ನು ನಿರ್ಮಿಸಲಿ ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಜನರ ವಿರೋಧದ ನಡುವೆಯೂ ರಾಜಾಸೀಟ್ ನಲ್ಲಿ ಗಾಜಿನ ಸೇತುವೆ ನಿರ್ಮಾಣಕ್ಕೆ ಮುಂದಾದರೆ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಆಮ್ ಆದ್ಮಿ ಪಾರ್ಟಿ ತೀವ್ರ ಪ್ರತಿಭಟನೆಯನ್ನು ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.





