ವಿರಾಜಪೇಟೆ: ವಿರಾಜಪೇಟೆ ಸಮೀಪದ ಒಂದನೇ ರುದ್ರಗುಪ್ಪೆಯಲ್ಲಿ ಕಾಡಾನೆಯೊಂದು ಕಾಫಿ ತೋಟದೊಳಗೆ ನುಗ್ಗಿ ದಾಂಧಲೆ ನಡೆಸಿದ ಪರಿಣಾಮ ಅಪಾರ ಪ್ರಮಾಣದ ಫಸಲು ನಷ್ಟವಾಗಿದೆ.
ವಿರಾಜಪೇಟೆ ಸಮೀಪದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ರುದ್ರಗುಪ್ಪೆ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವೊಂದು ಗ್ರಾಮದ ಎ.ಎಚ್.ಸರಸ್ವತಿ ಮತ್ತು ಟೋಮಿ ಎಂಬುವವರ ತೋಟಗಳಿಗೆ ನುಗ್ಗಿ ಕಾಫಿ, ಅಡಿಕೆ, ತೆಂಗು, ಬಾಳೆ ಗಿಡಗಳಿಗೆ ಹಾನಿಯುಂಟು ಮಾಡಿದೆ.
ಅಲ್ಲದೇ ವಿದ್ಯುತ್ ಪರಿವರ್ತಕದಿಂದ ಕೊಳವೆ ಬಾವಿಗೆ ಕಲ್ಪಿಸುವ ವಿದ್ಯುತ್ ತಂತಿ ತುಂಡರಿಸಿದೆ. ಇದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಕೂಡಲೇ ಈ ಬಗ್ಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾಡುಪ್ರಾಣಿಗಳ ಹಾವಳಿಯನ್ನು ತಡೆಯಲು ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಆನೆಗಳು ಕಾಡಿನಿಂದ ನಾಡಿಗೆ ಬರದಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಒಂದು ವೇಳೆ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳದೇ ಇದ್ದಲ್ಲಿ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.





