ಮಡಿಕೇರಿ: ನಾಡಿನ ಜೀವನದಿ ಕಾವೇರಿ ನದಿಯ ಮಾಲಿನ್ಯ ಮತ್ತು ನದಯ ಪಾತ್ರಗಳ ಒತ್ತುವರಿ ತಡೆಯಲು ತಂಡ ರಚಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಭಾಗಮಂಡಲದಲ್ಲಿ ಇಂದು(ಮಾರ್ಚ್.21) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಶ್ವ ಜಲದಿನದ ಪ್ರಯುಕ್ತ ಒಂದು ವಾರಗಳ ಕಾಲ ಜಲ ಸಂರಕ್ಷಣೆ ಅಭಿಯಾನ ನಡೆಯಲಿದೆ. ಈ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಕಾವೇರಿ ಆರತಿ ಆಯೋಜಿಸಲಾಗಿದೆ. ಈ ಆರತಿಯ ಪ್ರಮುಖ ಉದ್ದೇಶವೆಂದರೆ ನೀರಿನ ದುರ್ಬಳಕೆ ತಡೆಗಟ್ಟಿ, ಸದ್ಬಳಕೆ ಮಾಡುವಂತೆ ಜಾಗೃತಿ ಮೂಡಿಸುವುದಾಗಿದೆ ಎಂದರು.
ಕಾವೇರಿ ಆರತಿಗಾಗಿ ರಾಜ್ಯ ಸರ್ಕಾರದಿಂದ ಈಗಾಗಲೇ ಹಣ ಮೀಸಲಿಡಲಾಗಿದೆ. ಹಾಗಾಗಿಯೇ ಇಂದು ಕಾವೇರಿ ಆರತಿಯನ್ನು ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಜನರು ಆನ್‌ಲೈನ್ ಮೂಲಕ ಈ ನಾಡಿನ ನೀರನ್ನು ಉಳಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬಹುದು ಎಂದು ಹೇಳಿದರು.
ಇನ್ನು ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು, ರಾಜಕಾರಣಿಗಳು ಹಾಗು ಸಚಿವರು ಭಾಗವಹಿಸಬೇಕು ಎಂದು ಮನವಿ ಮಾಡಿದರು.





