ಸಿದ್ದಾಪುರ : ವಿರಾಜಪೇಟೆ ತಾಲೂಕು ಮಠ ಗ್ರಾಮದಲ್ಲಿ ಬುಧವಾರ ಸಂಜೆ ಹುಲಿಯೊಂದು ಹಾಲು ಕರೆಯುವ ಹಸುವಿನ ಮೇಲೆ ದಾಳಿ ನಡೆಸಿ ಬಲಿ ಪಡೆದ ಘಟನೆ ಸಂಭವಿಸಿದೆ.
ಗ್ರಾಮದ ನಿವಾಸಿ ಶಾರ್ಲಿ ಅವರಿಗೆ ಸೇರಿದ ಉತ್ತಮ ತಳಿಯ, ಬೆಲೆಬಾಳುವ ಹಾಲು ಕರೆಯುವ ಹಸುವನ್ನು ಮನೆಯ ಸಮೀಪದ ಗದ್ದೆಯಲ್ಲಿ ಮೇಯಲು ಕಟ್ಟಲಾಗಿತ್ತು. ಸಂಜೆ ಸಮಯದಲ್ಲಿ ಹಸುವನ್ನು ನೋಡಲು ತೆರಳಿದಾಗ ಅದು ಮೃತಪಟ್ಟಿರುವುದು ಕಂಡುಬಂದಿದೆ. ಪರಿಶೀಲನೆ ವೇಳೆ ಹಸುವಿನ ಕುತ್ತಿಗೆಯ ಭಾಗದಲ್ಲಿ ಗಂಭೀರ ಗಾಯಗಳ ಗುರುತು ಕಂಡುಬಂದಿದ್ದು, ಹುಲಿ ದಾಳಿ ನಡೆಸಿ ಹಸುವನ್ನು ಸಾಯಿಸಿರುವುದು ದೃಢಪಟ್ಟಿದೆ.
ಘಟನಾ ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಗಂಗಾಧರ್ ಅವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಶಶಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹುಲಿ ಸೆರೆ ಹಿಡಿಯುವಂತೆ ಒತ್ತಾಯ
ಇದಕ್ಕೂ ಮೊದಲು ಸೋಮವಾರ ಸಂಜೆ ಬಾಡಗ ಬಾಣಂಗಾಲ ಮಠ ಗ್ರಾಮದ ಕಾಫಿ ಬೆಳೆಗಾರ ಮಾಚಯ್ಯ (ಜಯ) ಅವರ ಕಾಫಿ ತೋಟದಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿದ್ದ ಘಟನೆ ನಡೆದಿತ್ತು. ಪದೇಪದೆ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಯುತ್ತಿರುವುದರಿಂದ ಆತಂಕಗೊಂಡಿರುವ ಗ್ರಾಮಸ್ಥರು, ಕೂಡಲೇ ದಾಳಿ ನಡೆಸುತ್ತಿರುವ ಹುಲಿಯನ್ನು ಸೆರೆ ಹಿಡಿಯಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ





