Mysore
21
scattered clouds

Social Media

ಗುರುವಾರ, 22 ಜನವರಿ 2026
Light
Dark

ಕೊಡಗು | ಜಿಲ್ಲೆಯಲ್ಲಿ ಮುಂದುವರೆದ ಮಳೆ, ಅಲ್ಲಲ್ಲಿ ರಸ್ತೆಬದಿ ಮಣ್ಣು ಕುಸಿತ

rain land slide s

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನದ ಬಳಿಕ ಮಳೆ ಚುರುಕುಗೊಂಡಿದ್ದು, ಸಾಧಾರಣ ಮಳೆ ಮುಂದುವರಿದಿದೆ.

ಜಿಲ್ಲೆಯಲ್ಲಿ ಶುಕ್ರವಾರ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆರೆಂಜ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಗುರುವಾರ ರಾತ್ರಿ ಕೂಡ ಉತ್ತಮ ಮಳೆಯಾಗಿತ್ತು. ಆದರೆ, ಶುಕ್ರವಾರ ಬೆಳಿಗ್ಗೆ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮಧ್ಯಾಹ್ನದ ಬಳಿಕ ಮಳೆ ಚುರುಕುಗೊಂಡಿದೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನಿಧಾನವಾಗಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಸಂಪಾಜೆ, ವಿರಾಜಪೇಟೆ ವ್ಯಾಪ್ತಿಯಲ್ಲಿಯೂ ಉತ್ತಮ ಮಳೆಯಾಗಿದೆ. ಭಾರೀ ಮಳೆಯಿಂದ ಮಡಿಕೇರಿ-ವಿರಾಜಪೇಟೆ ರಸ್ತೆಯ ಮೇಕೇರಿ ಬಳಿ ರಸ್ತೆಬದಿ ಸಣ್ಣ ಪ್ರಮಾಣದ ಮಣ್ಣು ಕುಸಿಯಲಾರಂಭಿಸಿದ್ದು, ಹೆಚ್ಚಿನ ಮಣ್ಣು ಕುಸಿದಲ್ಲಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಸೃಷ್ಟಿಯಾಗಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೬೪.೮೯ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೨೩.೧೩ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ ೨,೫೩೬.೪೮ ಮಿ.ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ ೨,೫೪೪.೭೩ ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ೯೧.೩೭ ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ ೯೫.೬೫ ಮಿ.ಮೀ., ಪೊನ್ನಂಪೇಟೆ ತಾಲ್ಲೂಕಿನಲ್ಲಿ ೫೪.೮೭ ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ ೪೩.೬೫ ಮಿ.ಮೀ., ಕುಶಾಲನಗರ ತಾಲ್ಲೂಕಿನಲ್ಲಿ ೩೮.೯೦ ಮಿ.ಮೀ. ಮಳೆಯಾಗಿದೆ. ಮಡಿಕೇರಿ ಕಸಬಾ ೬೫, ನಾಪೋಕ್ಲು ೭೬.೨೦, ಸಂಪಾಜೆ ೧೧೫.೫೦, ಭಾಗಮಂಡಲ ೧೦೮.೮೦, ವಿರಾಜಪೇಟೆ ೧೦೩.೮೦, ಅಮ್ಮತ್ತಿ ೮೭.೫೦, ಹುದಿಕೇರಿ ೭೨.೪೦, ಶ್ರೀಮಂಗಲ ೫೯, ಪೊನ್ನಂಪೇಟೆ ೭೫, ಬಾಳೆಲೆ ೧೩.೦೯, ಸೋಮವಾರಪೇಟೆ ೩೪.೨೦, ಶನಿವಾರಸಂತೆ ೩೪, ಶಾಂತಳ್ಳಿ ೭೨, ಕೊಡ್ಲಿಪೇಟೆ ೩೪.೪೦, ಕುಶಾಲನಗರ ೨೮.೬೦, ಸುಂಟಿಕೊಪ್ಪ ೪೯.೨೦ ಮಿ.ಮೀ. ಮಳೆಯಾಗಿದೆ.

Tags:
error: Content is protected !!