ಮಡಿಕೇರಿ: ಮೂರ್ನಾಡು ಸಮೀಪದ ಕಟ್ಟೆಮಾಡು ಮಹಾಮೃತ್ಯುಂಜಯ ದೇವಾಲಯದ ಅರ್ಚಕರ ಮೇಲೆ ಹಲ್ಲೆ ಮಾಡಿದ ಆರೋಪಿಗಳು ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಇಬ್ಬರು ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ವಿರಾಜಪೇಟೆಯ ಕಾವಾಡಿ ಗ್ರಾಮದ ನೆಲ್ಲಮಕ್ಕಡ ಎಂ ಶಿವಪ್ಪ(೫೦), ಮೈತಾಡಿ ಗ್ರಾಮದ ಬೋಳ್ಯಪಂಡ ಎಂ. ಭೀಮಯ್ಯ(೩೮) ಬಂಧಿತ ಆರೋಪಿಗಳು.
ಜ.೨೭ರಂದು ಇಬ್ಬರು ಆರೋಪಿಗಳು ಅರ್ಚಕ ವಿಘ್ನೇಶ್ ಭಟ್ ಎಂಬವರ ಮೇಲೆ ಹಲ್ಲೆ ಮಾಡಿದ್ದು, ಗಾಯಗೊಂಡಿರುವ ವಿಘ್ನೇಶ್ ಭಟ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹಲವು ಸಂಘಟನೆಗಳು ಖಂಡನೆ ವ್ಯಕ್ತಪಡಿಸಿವೆ.
ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಈ ನಡುವೆ ಆರೋಪಿಗಳು ತಲೆಮರೆಸಿಕೊಳ್ಳಲು ಸಹಕಾರ ನೀಡಿದ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಶಿವಪ್ಪ ಅವರು ಆರೋಪಿಗಳು ತಪ್ಪಿಸಿಕೊಳ್ಳಲು ತಮ್ಮ ಮಾರುತಿ ೮೦೦ ಕಾರನ್ನು ನೀಡಿದರೆ, ಬೋಳ್ಯಪಂಡ ಭೀಮಯ್ಯ ಅವರು ಆರೋಪಿಗಳು ಕೃತ್ಯವೆಸಗಿ ತೆರಳಿದ ವಾಹನವನ್ನು ತಮ್ಮ ತೋಟದಲ್ಲಿ ಬಚ್ಚಿಡುವಲ್ಲಿ ಸಹಕಾರ ನೀಡಿದ್ದರು. ಆರೋಪಿಗಳಿಗೆ ಸಹಕಾರ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಎಸ್‌ಪಿ ಕೆ ರಾಮರಾಜನ್, ಆರೋಪಿಗಳ ಸಂಬಂಧ ಮಾಹಿತಿ ದೊರೆತಲ್ಲಿ ೦೮೨೭೨-೨೨೮೩೩೦, ೯೪೮೦೮೦೪೯೦೦ ಸಂಖ್ಯೆಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.



