ಮಡಿಕೇರಿ: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದ್ದರೂ ಕುಟುಂಬ ಸದಸ್ಯರ ಪ್ರೋತ್ಸಾಹದ ಜೊತೆಗೆ ವಿನೂತನ ಪ್ರಯತ್ನಗಳು ಆದಾಗ ಮಾತ್ರ ಮತ್ತಷ್ಟು ಕ್ರೀಡಾಪಟುಗಳು ಬೆಳಕಿಗೆ ಬರಲು ಸಾಧ್ಯ ಎಂದು ಕೊಡಗಿನ ಹೆಸರಾಂತ ಬಾಸ್ಕೆಟ್ ಬಾಲ್ ಆಟಗಾತಿ೯ ಮಂಡೆಪಂಡ ಡಾ. ಪುಷ್ಪಾ ಕುಟ್ಟಣ್ಣ ಹೇಳಿದ್ದಾರೆ.
ನಗರದ ಕೊಡಗು ವಿದ್ಯಾಲಯದಲ್ಲಿ 55 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪನೆಯಾದ ತನ್ನದೇ ಹೆಸರಿನ ಡಾ. ಪುಷ್ಪಾ ಕುಟ್ಟಣ್ಣ ಬಾಸ್ಕೆಟ್ ಬಾಲ್ ಕೋರ್ಟ್ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಸ್ಥಳಗಳಲ್ಲಿ ನಿರ್ಮಾಣವಾಗಿರುವ ಬಾಸ್ಕೆಟ್ ಬಾಲ್ ಕೋರ್ಟ್‌ಗಿಂತ ಕೊಡಗು ವಿದ್ಯಾಲಯದಲ್ಲಿ ನಿರ್ಮಾಣವಾದ ಕ್ರೀಡಾಂಗಣ ವಿನೂತನವಾಗಿದೆ. ಇಂಥ ಹೊಸತನದ ಪ್ರಯತ್ನಕ್ಕೆ ಕೊಡಗು ವಿದ್ಯಾಲಯ ಮುಂದಾಗಿರುವುದು ಶ್ಲಾಘನೀಯ ಎಂದರು.
ತನ್ನ ಹೆಸರಿನಲ್ಲಿಯೇ ಬಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣವಾಗಿರುವುದು ತನ್ನ ಕ್ರೀಡಾಜೀವನದಲ್ಲಿಯೇ ಸ್ಮರಣೀಯವಾಗಿದೆ ಎಂದೂ ಅವರು ಧನ್ಯತಾ ಭಾವದಿಂದ ಹೇಳಿದರು.
ಪ್ರತೀ ಕ್ರೀಡಾಸಾಧಕರಿಗೆ ಮುಖ್ಯವಾಗಿ ಛಲ, ಗುರಿ ಬೇಕು. ಕ್ರೀಡಾಕ್ಷೇತ್ರದಲ್ಲಿಯೂ ಸಾಕಷ್ಟು ವಿಚಾರಗಳನ್ನು ಹೊಸದ್ದಾಗಿ ಕಲಿಯುವ ಅವಕಾಶಗಳಿರುತ್ತವೆ. ಕ್ರೀಡಾಕ್ಷೇತ್ರದ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ, ತಮ್ಮ ಪ್ರತಿಭೆಯನ್ನೂ ಬೆಳಕಿಗೆ ತರಲು ಸಾಧ್ಯ ಎಂದೂ ಪುಷ್ಪಾ ಕುಟ್ಟಣ್ಣ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ, ಪ್ರೊ. ಜುಗನ್ ಸುಖನ್ವೇಷರ್ ದ್ಯಾನೇಶ್ವರನ್ ಮಾತನಾಡಿ, ಕೊಡಗಿನ ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಬಾಸ್ಕೆಟ್ ಬಾಲ್ ತರಬೇತಿ ನೀಡುವ ನಿಟ್ಟಿನಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಪ್ರತಿಯೊಬ್ಬ ವಿದ್ಯಾಥಿ೯ಯೂ ತನ್ನ ಪ್ರತಿಭೆಯ ಮೇಲೆ ನಂಬಿಕೆ ಇರಿಸಿಕೊಂಡು ಕ್ರೀಡಾಸಾಧನೆಗೆ ಮುಂದಾಗಬೇಕು ಎಂದು ಯುವ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ನಿವೖತ್ತ ಏರ್ ಮಾಷ೯ಲ್ ಕೆ.ಸಿ.ಕಾರ್ಯಪ್ಪ, ಕೊಡಗು ವಿದ್ಯಾಲಯದ ಉಪಾಧ್ಯಕ್ಷೆ ಊರ್ವಶಿ ಮುದ್ದಯ್ಯ, ಕ್ರೀಡಾಸಮಿತಿ ಅಧ್ಯಕ್ಷ ರಘುಮಾದಪ್ಪ, ಸಲಹೆಗಾರರಾದ ಪಿ.ಇ. ಕಾಳಯ್ಯ, ಕೆ.ಯು.ಸುಬ್ಬಯ್ಯ, ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ಪಿ.ರವಿ, ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.





