Mysore
22
haze

Social Media

ಭಾನುವಾರ, 28 ಡಿಸೆಂಬರ್ 2025
Light
Dark

ರಾಜಾಸೀಟಿನಲ್ಲಿ ಪುಟಾಣಿ ರೈಲು ಆರಂಭಕ್ಕೆ ಕ್ರಮ

Action to start Putani train in Rajaseethi

ಮಡಿಕೇರಿ : ರಾಜಾಸೀಟಿನಲ್ಲಿ ಮಕ್ಕಳ ಪುಟಾಣಿ ರೈಲು ಆರಂಭ ಸಂಬಂಧ ದಕ್ಷಿಣ ವಲಯ ರೈಲ್ವೆ ವಿಭಾಗದ ಎಂಜಿನಿಯರ್‌ಗಳು ಪರಿಶೀಲಿಸಿದ್ದು, ಈ ಬಗ್ಗೆ ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈಲು ಬೋಗಿ ಅಳವಡಿಸುವುದು ಸೇರಿದಂತೆ ದಕ್ಷಿಣ ರೈಲ್ವೆ ವಲಯದ ವಿಭಾಗದ ಎಂಜಿನಿಯರ್‌ಗಳು ಮಾಹಿತಿ ಪಡೆದಿದ್ದು, ಈ ಸಂಬಂಧ ವರದಿ ಬಂದ ನಂತರ ಪುಟಾಣಿ ರೈಲು ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

ಈ ಕುರಿತು ವಿಷಯ ಪ್ರಸ್ತಾಪಿಸಿದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವಿಶೇಷ ಆಹ್ವಾನಿತರಾದ ಜಿ.ಚಿದ್ವಿಲಾಸ್, ರಾಜಾಸೀಟಿನಲ್ಲಿ ಮಕ್ಕಳ ರೈಲು ಸ್ಥಗಿತವಾಗಿ ಹಲವು ವರ್ಷಗಳಾಗಿದ್ದು, ಈ ಬಗ್ಗೆ ತುರ್ತು ಕ್ರಮವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು. ನಗರದ ಅಜ್ಜಮಾಡ ದೇವಯ್ಯ ವೃತ್ತದ ಬಳಿ ಮರ್ಕರ ಸ್ಕೈರ್ ಅನ್ನು ಆಕರ್ಷಣೀಯಗೊಳಿಸಿ ಅಭಿವೃದ್ಧಿ ಪಡಿಸುವಂತಾಗಬೇಕು ಎಂದು ಸಲಹೆ ಮಾಡಿದರು.

ಮಡಿಕೇರಿ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಕಿರಿದಾದ ರಸ್ತೆಗಳು ಇರುವುದರಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಬೇಕು ಎಂದು ಪ್ರಸ್ತಾವನೆ ಇದ್ದು, ಈ ಸಂಬಂಧ ತುರ್ತಾಗಿ ಆದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಇದಕ್ಕಾಗಿ ಅನುದಾನ ಮೀಸಲಿದ್ದು, ಟೆಂಡರ್ ಹಂತದಲ್ಲಿದೆ ಎಂದು ಹೇಳಿದರು.

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸದಸ್ಯೆ ಮೋಂತಿ ಗಣೇಶ್ ಮಾತನಾಡಿ, ರಾಜಾಸೀಟು ಮುಖ್ಯ ದ್ವಾರದ ಬಳಿ ಅಂಗಡಿಗಳು ತುಂಬಾ ಇದ್ದು, ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಸಲಹೆ ಮಾಡಿದರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ಕುಶಾಲನಗರ ಬಳಿಯ ತಾವರೆಕೆರೆ ಅಭಿವೃದ್ಧಿ ಪಡಿಸಿದ್ದಲ್ಲಿ ಇದನ್ನು ಸಹ ಪ್ರವಾಸಿ ತಾಣವನ್ನಾಗಿ ಮಾಡಬಹುದಾಗಿದೆ. ಇರ್ಪು ಜಲಪಾತದಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಪ್ರವಾಸಿಗರ ಅನುಕೂಲಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಿದರು.

ಹೋಟೆಲ್ ಅಸೋಷಿಯೇಷನ್‌ನ ದಿನೇಶ್ ಕಾರ್ಯಪ್ಪ ಮಾತನಾಡಿ, ಪ್ರವಾಸಿ ಸ್ಥಳಗಳ ಬಳಿ ಸೈನ್‌ಬೋರ್ಡ್ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹೋಂ ಸ್ಟೇ ಅಸೋಷಿಯೇಷನ್‌ನ ಮಾಜಿ ಅಧ್ಯಕ್ಷ ಕರುಂಬಯ್ಯ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳು ಸಂಚಾರ ಮಾಡುತ್ತಿದ್ದು, ಈ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸುವಂತಾಗಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ವಾಹನ ಪಾರ್ಕಿಂಗ್ ಸ್ಥಳವನ್ನು ಗುರುತು ಮಾಡಬೇಕು. ಹೋಟೆಲ್, ಹೋಂಸ್ಟೇ ರೆಸಾರ್ಟ್‌ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಸಿಸಿಟಿವಿ ಫುಟೇಜ್‌ನಿಂದ ಮಾಹಿತಿ ಪಡೆಯಲು ಸಾಧ್ಯವಾಗಲಿದ್ದು, ಆ ನಿಟ್ಟಿನಲ್ಲಿ ಸಾಮೂಹಿಕ ಜವಾಬ್ದಾರಿ ಅಗತ್ಯ ಎಂದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಮಾತನಾಡಿ, ಮುಂದಿನ ದಿನಗಳಲ್ಲಿ ಕಾಫಿ ತಯಾರಿಸುವ ವಿಧಾನ ಕುರಿತು ತರಬೇತಿ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಕಾಫಿ ಮಂಡಳಿಯ ಅಧ್ಯಕ್ಷರನ್ನು ಜಿಲ್ಲೆಗೆ ಆಹ್ವಾನಿಸಲಾಗುವುದು ಎಂದರು.

ಹಿರಿಯ ಪತ್ರಕರ್ತ ಅನಿಲ್ ಹೆಚ್.ಟಿ. ಮಾತನಾಡಿ, ಹೊರಜಿಲ್ಲೆಗಳಲ್ಲಿ ಕೊಡಗಿನ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚು ಪ್ರಚಾರ ಆಗಬೇಕು. ಬಾನುಲಿ ಎಫ್.ಎಂ., ಮಲ್ಟಿ ಪ್ಲೆಕ್ಸ್ ಗಳಲ್ಲಿ ಕೊಡಗಿನ ಬಗ್ಗೆ ಪ್ರಚಾರ ಆದಾಗ ಪ್ರವಾಸಿಗರಿಗೂ ಕೊಡಗಿನ ಬಗ್ಗೆ ಅಗತ್ಯ ಮಾಹಿತಿ ದೊರಕುತ್ತದೆ ಎಂದರಲ್ಲದೆ, ರಾಜ್ಯ ಮಟ್ಟದ ಮತ್ತು ಇತರ ರಾಜ್ಯಗಳ ಪತ್ರಿಕೆಗಳಲ್ಲಿ ಕೊಡಗು ಪ್ರವಾಸದ ಬಗ್ಗೆ ಮಾಹಿತಿ ಲೇಖನ ಪ್ರಕಟ ಆಗಬೇಕು. ಈ ಮೂಲಕ ಪ್ರವಾಸಿಗರಿಗೆ ದೊಡ್ಡ ರೀತಿಯಲ್ಲಿ ಕೊಡಗಿನ ಪರಿಚಯ ಆಗಲಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನೆಹರು, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎನ್.ಎಸ್.ಪಣೀಂದ್ರ, ಪರಿಸರ ಅಧಿಕಾರಿ ರಘುರಾಮ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ಕೆಆರ್‌ಐಡಿಎಲ್ ಸಂಸ್ಥೆಯ ಎಂಜಿನಿಯರ್ ಪ್ರಮೋದ್, ಕೊಡಗು ಜಿಲ್ಲಾ ಟೂರ್ ಅಂಡ್ ಟ್ರಾವೆಲ್ ಅಧ್ಯಕ್ಷ ವಸಂತ್ ಇತರರು ಇದ್ದರು.

Tags:
error: Content is protected !!