ಮಡಿಕೇರಿ: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಮನೆಯ ಮೇಲ್ಚಾವಣಿಗೆ ವ್ಯಾಪಿಸಿ ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್ ಹಾಗೂ ಬಟ್ಟೆಗಳು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಪೊನ್ನಂಪೇಟೆಯ ಕುಂದ ರಸ್ತೆಯ ಸತೀಶ್ ಕೆ.ಬಿ ಎಂಬುವವರ ಮನೆಯಲ್ಲಿ ನಡೆದಿದೆ.
ಬೆಂಕಿಯ ಕೆನ್ನಾಲಿಗೆಯು ಮನೆಯ ಸಮೀಪದ ಮತ್ತೊಂದು ಮನೆಗೂ ತಗುಲಿ ಬಟ್ಟೆ ಹಾಗೂ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಪ್ರಯತ್ನಿಶೀಲರಾಗಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ವಿದ್ಯುತ್ ಅವಘಡದಿಂದ ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಘಟನೆ ನಡೆಯುವ ಸಂದರ್ಭ ಮನೆಯಲ್ಲಿ ಯಾರು ಇಲ್ಲದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಸುದ್ದಿ ತಿಳಿದು ಪೊನ್ನಂಪೇಟೆ ಪೊಲೀಸ್ ಠಾಣೆಯ ಎ ಎಸ್ ಐ ಅರುಣ, ಹೆಡ್ ಕಾನ್ಸ್ಟೇಬಲ್ ಮೋಹಮ್ಮದ್ ಆಲಿ, ಸಿಬ್ಬಂದಿಗಳು, ಕಂದಾಯ ಅಧಿಕಾರಿಗಳಾದ ಸುಧೀಂದ್ರ, ಗ್ರಾಮ ಲೆಕ್ಕಿಗರು, ಚೆಸ್ಕಾಂನ ಜೂನಿಯರ್ ಇಂಜಿನಿಯರ್ ಹೇಮಂತ್ ಕುಮಾರ್ ಸಿಬ್ಬಂದಿಗಳು, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಗೋಪಿ, ಅಧ್ಯಕ್ಷರಾದ ಅಣ್ಣಿರ ಹರೀಶ್ ಉಪಾಧ್ಯಕ್ಷರಾದ ಅಲೀರ ರಶೀದ್, ಸದಸ್ಯ ನೇತ್ರ ಭೇಟಿ ನೀಡಿದರು. ಘಟನೆಯಿಂದ ಅಂದಾಜು ರೂ. 8 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.





