ಮಡಿಕೇರಿ: ಮೈಸೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿಯಾದ ಘಟನೆ ಹುಣಸೂರು-ಮಡಿಕೇರಿ ಹೆದ್ದಾರಿಯ ಕಲ್‌ಬೆಟ್ಟ ಜಂಕ್ಷನ್‌ನಲ್ಲಿ ಭಾನುವಾರ ನಡೆದಿದೆ.
ಮಿನಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಮಿನಿ ಬಸ್ ಉರುಳಿ ಬಿದ್ದಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. 17 ಮಂದಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಚಾಲಕ ಮಂಜು, ಮೈಸೂರಿನ ಉಮೇಶ್, ರಂಜಿತಾ, ರೂಪಾ, ಜ್ಯೋತಿ, ಹರ್ಷಿತ, ಸಿಂಚನ, ರಶ್ಮಿ, ಚಿರಾಗ್, ಪ್ರಶಾಂತ್, ಗಾಯತ್ರಿ, ರಾಘವೇಂದ್ರಸ್ವಾಮಿ, ಉತ್ತಮ್, ಶಶಿಕುಮಾರ್, ಭವನ್, ನಿಶ್ಚಲ, ರಶ್ಮಿ, ಇಲವಾಲದ ಪ್ರಿಯಾ, ಯಶೋಧ, ಹುಣಸೂರಿನ ಭುವನೇಶ್ವರಿ, ಕಡಕೊಳದ ಚಂದನ್ ಗಾಯಗೊಂಡವರು.
ಮೈಸೂರಿನಿಂದ ಮಡಿಕೇರಿಗೆ ವಿವಾಹ ವಿಚಾರದ ಮಾತುಕತೆಗಾಗಿ ಸುಮಾರು 25 ಮಂದಿ ಇದ್ದ ಮಿನಿ ಬಸ್ ತೆರಳುತ್ತಿತ್ತು. ಈ ವೇಳೆ ಕಲ್ ಬೆಟ್ಟ ಜಂಕ್ಷನ್ ಬಳಿ ವಿರಾಜಪೇಟೆ ರಸ್ತೆ ಕಡೆಯಿಂದ ಬಂದ ಲಾರಿ ಮತ್ತು ಮಿನಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಬಸ್ ಉರುಳಿ ಬಿದ್ದಿದೆ. ಈ ನಡುವೆ ಪಿರಿಯಾಪಟ್ಟಣ ಕಡೆಯಿಂದ ಬರುತ್ತಿದ್ದ ಸುಳ್ಯ ಮೂಲದ ಕಾರು ಕೂಡ ಲಾರಿಗೆ ಡಿಕ್ಕಿಯಾಗಿದೆ. ಕಾರು ಜಖಂಗೊಂಡಿದ್ದು, ಕಾರ್ ಏರ್ ಬ್ಯಾಗ್ ಇದ್ದ ಕಾರಣ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹುಣುಸೂರು ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.