Mysore
15
broken clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಫೆಬ್ರವರಿ 7ರಂದು ಮಂಡ್ಯ ಬಂದ್‌ಗೆ ಕರೆ ನೀಡಿದ ಸಮಾನ ಮನಸ್ಕರ ವೇದಿಕೆ

ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜವನ್ನು ತೆರವು ಮಾಡಿ ರಾಷ್ಟ್ರಧ್ವಜವನ್ನು ಹಾರಿಸಿದ ವಿಷಯ ಸದ್ಯ ರಾಜಕೀಯ ಸ್ವರೂಪವನ್ನು ಪಡೆದುಕೊಂಡು ವಾದ ವಿವಾದಗಳಿಗೆ ಮಾಡಿಕೊಟ್ಟಿದೆ. ಒಂದೆಡೆ ಕಾಂಗ್ರೆಸ್‌ ನಾವು ತಿರಂಗ ಯಾತ್ರೆ ಮಾಡಲಿದ್ದೇವೆ ಎಂದು ಹೇಳಿಕೆಯನ್ನು ನೀಡಿದ್ದರೆ, ಮತ್ತೊಂದೆಡೆ ಬಿಜೆಪಿ ಕೇಸರಿ ಧ್ವಜ ಯಾತ್ರೆ ಮಾಡುತ್ತೇವೆ ಎಂದು ಹೇಳಿಕೊಂಡಿದೆ.

ಇದೆಲ್ಲದ್ದರ ನಡುವೆ ಇದೀಗ ಸಮಾನ ಮನಸ್ಕರ ವೇದಿಕೆ ಫೆಬ್ರವರಿ 7ರಂದು ಮಂಡ್ಯ ಬಂದ್‌ ಮಾಡಲು ಕರೆ ನೀಡಿದೆ. ಮಂಡ್ಯದಲ್ಲಿ ಸೌಹಾರ್ಹ ಮತ್ತು ಶಾಂತಿ ಕದಡುತ್ತಿರುವ ಶಕ್ತಿಗಳ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.

ಈ ಕುರಿತು ಸುದ್ದಿಗೋಷ್ಟಿ ನಡೆದಿದ್ದು, ಸಮಾನ ಮನಸ್ಕರ ವೇದಿಕೆ ಸಂಚಾಲಕ ಲಕ್ಷ್ಮಣ್‌ ಚೀರನಹಳ್ಳಿ ಮಾತನಾಡಿ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜದ ವಿಷಯ ಇಟ್ಟುಕೊಂಡು ಶಾಂತಿ ಕದಡುತ್ತಿದ್ದಾರೆ. ರಸ್ತೆಗಳಲ್ಲಿ ಕಲ್ಲು ತೂರಾಟ ಮಾಡಿ ಪುಂಡಾಟಿಕೆ ಮಾಡುತ್ತಿದ್ದಾರೆ. ಶಾಂತಿ ಹಾಗೂ ಸೌಹಾರ್ದತೆ ಕದಡುತ್ತಿರುವವರನ್ನು ನಾವು ಖಂಡಿಸುತ್ತೇವೆ. ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತ ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟಿದ್ದು ತಪ್ಪು ಎಂದು ಹೇಳಿದರು.

ಬರಪೀಡಿತ ಹಾಗೂ ನಿರುದ್ಯೋಗದ ಬಗ್ಗೆ ಚರ್ಚೆಯಾಗಬೇಕು. ವಿರೋಧ ಪಕ್ಷಗಳು ಮಂಗಳೂರಿನ ರೀತಿ ಮಂಡ್ಯದಲ್ಲಿ ಶಾಂತಿ ಕದಡುತ್ತಿದ್ದಾರೆ. ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾಕಿದ್ದಾರೆ. ರೈತರು ಅಂಬೇಡ್ಕರ್‌, ಮುಸ್ಲಿಂ, ಕನ್ನಡ ಧ್ವಜ ಹಾಕುತ್ತೇವೆ ಎಂದರೆ ಅಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ರಾಜಕೀಯ ಪಕ್ಷಗಳು ಸರ್ಕಾರದ ವಿರುದ್ಧ ಧ್ವಜ ಇಟ್ಟುಕೊಂಡು ಹೋಗುತ್ತಿರುವುದು ಸರಿಯಲ್ಲ. ಇದು ಜನ ವಿರೋಧಿ ರಾಜಕೀಯ. ಪ್ರತಿಭಟನೆಗಳ ಹೆಸರಿನಲ್ಲಿ ಗೂಂಡಾಗಿರಿ ಮಾಡುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ ತಲೆ ದೋರುತ್ತಿದೆ. ಸಿಟಿ ರವಿ ರಾಷ್ಟ್ರ ಧ್ವಜವನ್ನು ತಾಲಿಬಾನ್‌ಗೆ ಹೋಲಿಕೆ ಮಾಡಿದ್ದಾರೆ. ಕೋಮುವಾದಕ್ಕೆ ವಿರೋಧ ವ್ಯಕ್ತಪಡಿಸಬೇಕು ಎಂದು ಲಕ್ಷ್ಮಣ್‌ ಚೀರನಹಳ್ಳಿ ತಿಳಿಸಿದರು.

ಇನ್ನೂ ಮುಂದುವರಿದು ಮಾತನಾಡಿದ ಅವರು ಫೆಬ್ರವರಿ 9ರಂದು ಬಿಜೆಪಿ – ಜೆಡಿಎಸ್‌ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಇದು ಒಳ್ಳೆಯದಲ್ಲ. ಇದನ್ನು ನಿಲ್ಲಿಸಲು ಫೆಬ್ರವರಿ 7ರಂದು ಮಂಡ್ಯ ಬಂದ್‌ಗೆ ಕರೆ ಕೊಟ್ಟಿದ್ದೇವೆ. ಅನುಮತಿ ಇಲ್ಲದೇ ಹನುಮ ಧ್ವಜ ಹಾಕಿರುವುದು ತಪ್ಪು. ಶಾಂತಿ ಕದಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಮಂಡ್ಯ ಜಿಲ್ಲೆ ಮಂಗಳೂರು ಆಗಬಾರದು ಎಂಬ ಕಾರಣಕ್ಕೆ ಪುಂಡಾಟಿಕೆ ನಿಲ್ಲಿಸಲು ಬಂದ್‌ ಮಾಡುತ್ತಿದ್ದೇವೆ. ಮಂಡ್ಯ ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕು ಎಂದು ಹೇಳಿಕೆ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!