ಹನೂರು: ಮಲೆ ಮಹದೇಶ್ವರ ವನ್ಯಜೀವಿ ಧಾಮದ ಅರಣ್ಯ ಪ್ರದೇಶದ ಕಾಲು ದಾರಿ ಮೂಲಕ ತಮಿಳುನಾಡಿನ ಕಸಾಯಿಖಾನೆಗೆ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ವೇಳೆ ಮ.ಬೆಟ್ಟ ಪೋಲಿಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿರುವ ಘಟನೆ ಬುಧವಾರ ಜರುಗಿದೆ.
ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರನ ಹೊಲ ಗ್ರಾಮದ ನಿವಾಸಿಗಳಾದ ಪುಟ್ಟಸ್ವಾಮಿ, ಶಂಕಣ್ಣ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೊಬ್ಬ ಆರೋಪಿ ವೀರಣ್ಣ ಪರಾರಿಯಾಗಿದ್ದಾನೆ.
ಘಟನೆಯ ವಿವರ :ರೈತರ ಸೋಗಿನಲ್ಲಿ ಕಾಡು ದಾರಿಯ ಮೂಲಕ ನಡೆದುಕೊಂಡು ತಮಿಳುನಾಡಿನ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮ ಬೆಟ್ಟ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕ ಬಸವರಾಜು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ 3 ಹಸು, 1 ಹೋರಿ, 1 ಕರುವನ್ನು ರಕ್ಷಿಸಿ ,ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಜಾನುವಾರುಗಳನ್ನು ಕುರುಬೂರು ಸಮೀಪದ ಪಶು ಪಾಲನಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ದಾಳಿಯಲ್ಲಿ ಮುಖ್ಯ ಪೇದೆಗಳಾದ ಗೋವಿಂದರಾಜು ಅಸ್ಲಮ್ ಪಾಶ, ಬಸವರಾಜೇಂದ್ರ ಪೇದೆಗಳಾದ ಜಯರಾಮ್ ವಿಶ್ವನಾಥ್ ಪಾಲ್ಗೊಂಡಿದ್ದರು.