ಮೈಸೂರು: ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರು ವರ್ಷಕ್ಕೊಮ್ಮೆ ಮಾತ್ರ ಜಾತ್ರೆಗಳ ಸಂದರ್ಭದಲ್ಲಿ ಆಗಮಿಸಿ ಜನರು ಸೇರುವ ಸ್ಥಳದಲ್ಲಿ ದೊಡ್ಡ ಸುದ್ದಿಯಾಗುವ ರೀತಿ ಮಾತನಾಡಿ ಹೋಗುತ್ತಾರೆ. ವರುಣಾ ಕ್ಷೇತ್ರಕ್ಕೆ ಅವರ ಕೊಡುಗೆ ಏನು ಇಲ್ಲ. ಬಿಜೆಪಿ ಪಕ್ಷದಿಂದ ಅವರು ಸ್ಪರ್ಧಿಸಿದರೆ ಸೋಲುವುದು ಖಚಿತ, ಒಂದು ವೇಳೆ ಅವರು ಸ್ಪರ್ಧಿಸಿ ಜಯಗಳಿಸಿದ್ದೇ ಆದಲ್ಲಿ ನಾನು ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಟಿ. ನರಸೀಪುರ ಪುರಸಭೆ ಅಧ್ಯಕ್ಷರಾದ ಮದನ್‌ರಾಜ್ ಸವಾಲು ಹಾಕಿದ್ದಾರೆ.
ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಚಾರವಾಗಿ ಮಾಹಿತಿ ನೀಡಿದ್ದಾರೆ. ವಿಜಯೇಂದ್ರ ಅವರು ಬಂದಾಗಲೆಲ್ಲಾ ಜಾತಿಯ ಹೆಸರಲ್ಲಿ ಕ್ಷೇತ್ರದಲ್ಲಿ ವಿಷ ಬೀಜ ಬಿತ್ತಿ ಹೋಗುತ್ತಿದ್ದಾರೆ. ಆದರೆ ಕ್ಷೇತ್ರದ ಜನರು ಇದಕ್ಕೆ ಬಲಿಯಾಗುವುದಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಸದಸ್ಯರಾದ ಮಂಜುನಾಥ್, ಕಾಂಗ್ರೆಸ್ ಮುಖಂಡ ಮಲ್ಲೇಶ್, ಶ್ರೀಕಂಠ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.