ಹಾಸನ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿರುವ ವಿಕ್ರಾಂತ್ ಆನೆ ಕಾರ್ಯಾಚರಣೆ ಇಂದು ಕೂಡ ವಿಫಲವಾಗಿದೆ.
ನಿನ್ನೆ ಹಾಗೂ ಇಂದಿನ ಎರಡು ದಿನದ ಕಾರ್ಯಾಚರಣೆಯೂ ವಿಫಲವಾಗಿದ್ದು, ಇಂದು ಕೂಡ ಸತತ ಆರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಧ್ಯಾಹ್ನದ ನಂತರ ಥರ್ಮಲ್ ದ್ರೋಣ್ ಬಳಸಿ ಕಾಡಾನೆ ಪತ್ತೆ ಮಾಡಿ ಅದಕ್ಕೆ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಲು ಮುಂದಾಗಿದ್ದರು. ಆದರೆ ಕಾರ್ಯಾಚರಣೆ ನಡೆಸುವ ಸ್ಥಳದಲ್ಲಿ ವಿಕ್ರಾಂತ್ ಆನೆ ಹೊರತುಪಡಿಸಿ ಬೇರೆ ಆನೆ ಇದ್ದವು. ಈ ಹಿನ್ನೆಲೆಯಲ್ಲಿ ಇಂದಿನ ಕಾರ್ಯಾಚರಣೆ ಸ್ಥಗಿತವಾಗಿದ್ದು, ನಾಳೆಯೂ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆಯಿದೆ.
ಸುಮಾರು ಇನ್ನೂರಕ್ಕೂ ಹೆಚ್ಚು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಜೊತೆ ನಡೆದ ಕಾರ್ಯಾಚರಣೆಯಲ್ಲಿ ಸುಮಾರು ಏಳು ಸಾಕಾನೆಗಳು ಕೂಡ ಭಾಗಿಯಾಗಿದ್ದವು. ಆದರೆ ವಿಕ್ರಾಂತ್ ಆನೆ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದು, ಸತತ ಎರಡು ದಿನಗಳ ಕಾರ್ಯಾಚರಣೆ ಸಂಪೂರ್ಣ ವಿಫಲವಾಗಿದೆ.
ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾಕಾನೆಗಳು ಹೈರಾಣಾಗಿದ್ದು, ಹೇಗಾದರೂ ಮಾಡಿ ವಿಕ್ರಾಂತ್ ಆನೆಯನ್ನು ಸೆರೆಹಿಡಿಯಲೇಬೇಕು ಎಂದು ಪಣ ತೊಟ್ಟಿದ್ದಾರೆ.





