ಹಾಸನ : ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಮನೆ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಕೊಂದು ತಿಂದಿರುವ ಘಟನೆ ಹೊಳೆನರಸೀಪುರ ತಾಲೂಕಿನ ಟಿ.ಮಾಯಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಟಿ.ಮಾಯಗೌಡನಹಳ್ಳಿ ಗ್ರಾಮದ ನೂತನ್ ಎನ್ನುವವರ ಮನೆಯ ಅಂಗಳಕ್ಕೆ ಬಂದಿರುವ ಚಿರತೆ ಬಾಗಿಲಲ್ಲಿ ಕಟ್ಟಿದ್ದ ನಾಯಿಯನ್ನು ಮೊದಲು ಕೊಂದು ಹಾಕಿದೆ. ಬಳಿಕ ಅದನ್ನು ಹೊತ್ತೊಯ್ಯಲು ಹರಸಾಹಸ ಪಟ್ಟಿದೆ. ಕಟ್ಟಿ ಹಾಕಿದ್ದರಿಂದ ನಾಯಿಯನ್ನು ಬಿಡಿಸಲಾಗದೇ ಅಲ್ಲೇ ತಿಂದು ಹಾಕಿದೆ. ಈ ರೀತಿ ಚಿರತೆ ಮನೆ ಹತ್ತಿರ ಬಂದು ನಾಯಿಯನ್ನು ತಿನ್ನುತ್ತಿರುವುದು ಇದೇ 2ನೇ ಬಾರಿಯಾಗಿದೆ.
ಸದ್ಯ ಚಿರತೆ ಮನೆಯಂಗಳಕ್ಕೆ ಬಂದು ನಾಯಿಯನ್ನು ತಿನ್ನುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೊಂದು ಕಡೆ ಕೂಡ ವೆಂಕಟೇಶ್ ಎನ್ನುವರಿಗೆ ಸೇರಿದ್ದ ಕರುವನ್ನು ತಿಂದು ಹಾಕಿದೆ. ಸದ್ಯ ಈ ಘಟನೆಗಳಿಂದ ಗ್ರಾಮಸ್ಥರು ಆತಂಕಗೊಂಡಿದ್ದು ಕೂಡಲೇ ಚಿರತೆಯನ್ನು ಹಿಡಿಯಬೇಕು ಎಂದು ಅರಣ್ಯ ಇಲಾಖೆಗೆ ಒತ್ತಾಯ ಮಾಡಿದ್ದಾರೆ.