ಹಾಸನ: ಹಾಸನದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ನಾಳೆ ಜಿಲ್ಲೆಯ ನಾಲ್ಕು ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಡಿಡಿಪಿಐ ಹೆಚ್.ಕೆ.ಪಾಂಡು ಆದೇಶ ಹೊರಡಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಹಾಸನ, ಸಕಲೇಶಪುರ, ಆಲೂರು ಮತ್ತು ಬೇಲೂರು ತಾಲ್ಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ನಾಳೆಯ ರಜೆಯನ್ನು ಶನಿವಾರದಂದು ಸರಿದೂಗಿಸಿಕೊಳ್ಳಲು ಸೂಚಿಸಲಾಗಿದೆ.
ಇನ್ನೂ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಚಿಕ್ಕ ಚಿಕ್ಕ ಗುಂಡಿಗಳಲ್ಲಿ ನೀರು ನಿಂತುಕೊಂಡು ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ಮತ್ತಷ್ಟು ಹರಡುವ ಆತಂಕ ಎದುರಾಗಿದೆ. ಆದ್ದರಿಂದ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ ಎಂದು ಮನವಿ ಮಾಡಿದ್ದಾರೆ.