ಹಾಸನ: ಹಾಸನದ ಗೊರೂರು ಅಣೆಕಟ್ಟು ತನ್ನ ಗರಿಷ್ಠ ಮಿತಿ ತಲುಪುವ ಹಂತದಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ಅಣೆಕಟ್ಟೆಯಿಂದ ಹೇಮಾವತಿ ನದಿಗೆ ಅಪಾರ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗಿದೆ.
ಪರಿಣಾಮ ಹೇಮಾವತಿ ನದಿ ರೌದ್ರಾವತಾರ ತಾಳಿದ್ದು, ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನತೆ ಭಾರೀ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಇನ್ನೂ ಹೇಮಾವತಿ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆ ತಮ್ಮ ತಮ್ಮ ಜಾನುವಾರುಗಳನ್ನು ಸಹ ಸ್ಥಳಾಂತರ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ನದಿ ಬಳಿ ಮೀನುಗಾರರು ಮೀನು ಹಿಡಿಯಲು ತೆರಳಬಾರದು. ಒಂದು ವೇಳೆ ಸೂಚನೆಯನ್ನೂ ಮೀರಿ ನದಿಗೆ ತೆರಳಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ನದಿಗೆ ಬಳಿಗೆ ಬಟ್ಟೆ, ಪತ್ರೆ ತೊಳೆಯಲು ಹೋಗಬಾರದು. ನದಿಯಲ್ಲಿ ಸ್ನಾನ ಮಾಡುವುದಾಗಲಿ, ಈಜುವುದಾಗಲಿ ಮಾಡಬಾರದು ಎಂದು ಸೂಚನೆ ನೀಡಲಾಗಿದ್ದು, ನದಿಯ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಬಹಳ ವರ್ಷಗಳ ನಂತರ ಹೇಮಾವತಿಗೆ ಜೀವಕಳೆ ಬಂದಿರುವ ಹಿನ್ನೆಲೆಯಲ್ಲಿ ರೈತರು ಸಂತಸಗೊಂಡಿದ್ದು, ತುಂಬಿರುವ ನದಿಯ ಸೊಬಗನ್ನು ವೀಕ್ಷಿಸಲು ನದಿಯ ಬಳಿ ಜನರು ತೆರಳುತ್ತಿದ್ದಾರೆ.