ಹಾಸನ : ತಾಲೂಕಿನ ಕೆಲವತ್ತಿ ಗ್ರಾಮದ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕೆ.ವಿ ಕವನಾ(21) ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಗ್ರಾಮದ ಪಾಪಣ್ಣ ಮತ್ತು ಗಾಯಿತ್ರಿ ದಂಪತಿ ಪುತ್ರಿ ಕೆ.ವಿ ಕವನಾ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದು, ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿದ್ದರು.
ಬುಧವಾರ ಸಂಜೆ ಮನೆಗೆ ನೀರು ತರುತ್ತಿದ್ದಾಗ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ತಾಯಿ ಬಳಿ ಕುಡಿಯಲು ನೀರು ಕೇಳಿದ್ದಾರೆ. ತಾಯಿ ನೀರು ತರುವಷ್ಟರಲ್ಲಿ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಮೃತ ವಿದ್ಯಾರ್ಥಿನಿ ಮೂರು ಪರೀಕ್ಷೆ ಬರೆದಿದ್ದು, ಶುಕ್ರವಾರ ನಾಲ್ಕನೇ ಪರೀಕ್ಷೆ ಇತ್ತು. ಜಿಲ್ಲೆಯಲ್ಲಿ ತಿಂಗಳಲ್ಲಿ ಹೃದಯಾಘಾತದಿಂದ ಇಬ್ಬರು ಯುವತಿಯರು, ಓರ್ವ ಯುವಕ ಸಾವನ್ನಪ್ಪಿದ್ದಾನೆ.





