ಹಾಸನ: ಕಾಡಾನೆಗಳ ಚಲನವಲನದ ಮೇಲೆ ನಿಗಾ ಇಟ್ಟು, ಮಾಹಿತಿ ಪಡೆದುಕೊಳ್ಳಲು ಅರಣ್ಯ ಇಲಾಖೆ ಬಿಗ್ ಪ್ಲಾನ್ ರೂಪಿಸಿದೆ.
ಹಾಸನ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಕಾಡಾನೆಗಳ ಮೇಲೆ ನಿಗಾ ವಹಿಸಲು ʼಆನೆ ಎಲ್ಲಿ ಡಾಟ್ ಕಾಂ ವೆಬ್‌ಸೈಟ್ʼ ರೂಪಿಸಿದ್ದು, ವೆಬ್‌ಸೈಟ್‌ಗೆ ಚಾಲನೆ ದೊರೆತಿದೆ.
ಹಾಸನ ಅರಣ್ಯ ಭವನದಲ್ಲಿ ಫಾರೆಸ್ಟ್ ಕಂಟ್ರೋಲ್ ರೂಂ ತೆರೆದು ಪೊಲೀಸ್ ಇಲಾಖೆಯ ಮಾದರಿಯಲ್ಲಿ ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಕಾಡಂಚಿನ ಗ್ರಾಮಗಳಲ್ಲಿ ಎಲ್ಲೆಂದರಲ್ಲಿ ಕಾಡಾನೆಗಳು ದಾಳಿ ನಡೆಸುತ್ತಿದ್ದು, ರೈತರು ಬೆಳೆದ ಫಸಲನ್ನು ತುಳಿದು ನಾಶ ಪಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ವೆಬ್‌ಸೈಟ್‌ಗೆ ಚಾಲನೆ ನೀಡಲಾಗಿದ್ದು, ಇದರಲ್ಲಿ ಕಾಡಾನೆಗಳ ವಿವರ ಲಭ್ಯವಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಎಫ್ ಸೌರಭ್ ಕುಮಾರ್ ಅವರು, ಜಿಲ್ಲೆಯಾದ್ಯಂತ ಕಂಟ್ರೋಲ್ ರೂಂ ವಿಸ್ತರಿಸಲಾಗಿದ್ದು, ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲ್ಲೂಕಿನಲ್ಲಿ ಸಂಚರಿಸುವ ಕಾಡಾನೆಗಳ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಗೂಗಲ್ ಮ್ಯಾಪ್ ಹಾಗೂ ಸ್ಯಾಟಲೈಟ್ ಮ್ಯಾಪ್‌ಗಳ ಸಹಾಯದಿಂದ ಆನೆಗಳು ಎಲ್ಲಿವೆ.?, ಗುಂಪಿನಲ್ಲಿವೆಯಾ ಅಥವಾ ಒಂಟಿಯಾಗಿವೆಯಾ.?, ಗ್ರಾಮಗಳ ಹತ್ತಿರವಿದೆಯಾ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.