ಹಾಸನ: ತೋಟದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಐದು ಹಸು, ಒಂದು ಕರು, ಹದಿನೈದು ಸಾವಿರ ಕೊಬ್ಬರಿ, ಹತ್ತು ಸಾವಿರ ತೆಂಗಿನಕಾಯಿ ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹೆಂಜಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿವಣ್ಣ ಎಂಬುವವರಿಗೆ ಸೇರಿದ ತೋಟದ ಮನೆ ಇದಾಗಿದ್ದು, ಮನೆಯಲ್ಲಿ ದಾಸ್ತಾನು ಮಾಡಿದ್ದ ಸಾವಿರಾರು ಕೊಬ್ಬರಿ ಹಾಗೂ ತೆಂಗಿನಕಾಯಿಗಳು ಸುಟ್ಟು ಕರಕಲಾಗಿವೆ. ಕಳೆದ ತಡರಾತ್ರಿ ಶಿವಣ್ಣ ಅವರು, ಹಾಲು ಕರೆದು ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿ ಜಾಜೂರಿನ ವಾಸದ ಮನೆಗೆ ಬಂದಿದ್ದರು. ಇಂದು ಬೆಳಿಗ್ಗೆ ಮತ್ತೆ ಹಾಲು ಕರೆಯಲು ಹೋದಾಗ ಹಸುಗಳು, ಕರು, ಕೊಬ್ಬರಿ ಹಾಗೂ ತೆಂಗಿನಕಾಯಿಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದವು. ಇದನ್ನು ಕಂಡು ಆಘಾತಗೊಂಡ ರೈತ ಶಿವಣ್ಣ ಹಾಗೂ ಕುಟುಂಬದವರ ರೋಧನೆ ಹೇಳತೀರದಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು, ರೈತ ಶಿವಣ್ಣ ಅವರಿಗೆ ಧೈರ್ಯ ತುಂಬಿ, ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.