ಹಾಸನ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ನಡೆಯುತ್ತಿರುವ ಬಿಜೆಪಿ ರ್ಯಾಲಿಗೆ ಹಾಸನದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಬೃಹತ್ ರ್ಯಾಲಿಗೆ ಬೂವನಹಳ್ಳಿ ಬೈಪಾಸ್‌ನಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರು. ಸ್ವಾಗತ ಕೋರುತ್ತಿದ್ದಂತೆ ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂಬ ಘೋಷ ವಾಕ್ಯವನ್ನು ಕಾರ್ಯಕರ್ತರು ಕೂಗಿದ್ದಾರೆ. ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಈ ರ್ಯಾಲಿ ನಡೆಯುತ್ತಿದೆ. ರ್ಯಾಲಿಯಲ್ಲಿ ಸುಮಾರು 400ಕ್ಕೂ ಹೆಚ್ಚು ವಾಹನಗಳಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ರ್ಯಾಲಿಯಲ್ಲಿ ನೂರಾರು ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಮಧ್ಯಾಹ್ನ 3 ಗಂಟೆಗೆ ರ್ಯಾಲಿ ಧರ್ಮಸ್ಥಳ ತಲುಪಲಿದೆ. ಕಾರ್ಯಕರ್ತರು ದೇವರ ದರ್ಶನ ಪಡೆದು ಧರ್ಮಸ್ಥಳದಲ್ಲೇ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಶಾಸಕರ ನಿಯೋಗವು ನಾಳೆ ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಬಿಜೆಪಿ ಶಾಸಕರು ನಿಯೋಗದಲ್ಲಿರುತ್ತಾರೆ. ಬಿಜೆಪಿ ನಾಯಕರು ಧರ್ಮಸ್ಥಳ ಧರ್ಮಾಧಿಕಾರಿಯನ್ನು ಭೇಟಿ ಮಾಡಿ ನೈತಿಕ ಬೆಂಬಲ ಸೂಚಿಸಲಿದ್ದಾರೆ.





