ಹಾಸನ : ಭೂಸ್ವಾಧೀನ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ನೀಡಿ ೭ ವರ್ಷ ಕಳೆದರೂ ಸಹ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಸಕಲೇಶಪುರದ ತಹಶೀಲ್ದಾರ್ ಕಚೇರಿಯ ವಾಹನ, ಪೀರೋಪಕರಣಗಳನ್ನ ಅಧಿಕಾರಿಗಳಿಂದ ಜಪ್ತಿ ಮಾಡಲಾಗಿದೆ.
೧೯೯೪ರಲ್ಲಿ ಬೇಲೂರು ಚೆನ್ನಕೇಶವ ದೇವಾಲಯಕ್ಕೆ ಹೊಂದಿಕೊಂಡಿದ್ದಿದ್ದ ಸುದೀಂದ್ರ ಹಾಗೂ ರಾಮು ಎಂಬುವವರ ೮೦೦ ಚದರ ಅಡಿ ಭೂಮಿಯನ್ನ ಹೋಟೆಲ್ ನಿರ್ಮಾಣಕ್ಕಾಗಿ ಪ್ರವಾಸೋಧ್ಯಮ ಇಲಾಖೆ ಭೂಸ್ವಾಧೀನ ಪಡಿಸಿಕೊಂಡಿತ್ತು. ಈ ವೇಳೆ ಪ್ರತಿ ಚದರ ಅಡಿಗೆ ಇಲಾಖೆ ೨೭೭ ರೂಗಳಂತೆ ಪರಿಹಾರ ನೀಡಿತ್ತು. ಹೆಚ್ಚಿನ ಪರಿಹಾರ ನೀಡುವಂತೆ ಜಾಗದ ಮಾಲೀಕರು ನ್ಯಾಯಾಲಯದ ಮೋರೆ ಹೋಗಿದ್ದರು.
ಸುದೀರ್ಘವಾದ ವಿಚಾರಣೆ ನಂತರ ಚದರ ಅಡಿಗೆ ೯೫೦ ರೂ ನಂತೆ ೧.೭೫ ಕೋಟಿ ಪರಿಹಾರ ನೀಡಬೇಕು ಎಂದು ಅಂದಿನ ಭೂ ಸ್ವಾದೀನಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗೆ ನ್ಯಾಯಾಲಯ ಆದೇಶ ಮಾಡಿತ್ತು. ಈ ತೀರ್ಪು ಪ್ರಕಟಕೊಂಡು ೭ ವರ್ಷಗಳು ಕಳೆದರೂ ಪರಿಹಾರ ಮಾತ್ರ ನೀಡುತ್ತಿಲ್ಲ. ಹೀಗಾಗಿ ಉಪವಿಭಾಗಾಧಿಕಾರಿ ಕಚೇರಿ ಜಪ್ತಿಗೆ ಬೇಲೂರು ನ್ಯಾಯಾಲಯ ಆದೇಶ ಮಾಡಿತ್ತು. ಆದೇಶದ ಅನ್ವಯ ೨ ಲಾರಿಗಳಲ್ಲಿ ಅಧಿಕಾರಿಗಳು ಕಚೇರಿಯ ಪೀಠೋಪಕರಣಗಳನ್ನ ತುಂಬಿಕೊಂಡು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ.