ಮೈಸೂರು: ಉತ್ತಮ ಆರೋಗ್ಯ, ಉತ್ಸಾಹ ಹಾಗೂ ಉಲ್ಲಾಸಭರಿ ಜೀವನಕ್ಕಾಗಿ ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದು ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್ ಹೇಳಿದರು.
ಬುಧವಾರ ನಗರದ ಬೇಡನ್‌ಪೂವೆಲ್ ಪಬ್ಲಿಕ್ ಶಾಲೆಯ ಕ್ರೀಡಾ ಮೈದಾನದಲ್ಲಿ ವಿದ್ಯಾವರ್ಧಕ ಪದವಿಪೂರ್ವ ಕಾಲೇಜು ವತಿಯಿಂದ ದಿ.ಹೆಚ್.ಕೆಂಪೇಗೌಡ, ದಿ.ಆರ್.ನಂಜಯ್ಯ ಮತ್ತು ದಿ.ಹೆಚ್.ಬಿ,.ನರಸಯ್ಯ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಥ್ರೋಬಾಲ್, ಕಬ್ಬಡ್ಡಿ ಮತ್ತು ವಾಲೀಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಪಠ್ಯ ಚಟುವಟಿಕೆಗಳಲ್ಲಿ ತೊಡಗಿದರೆ ಆರೋಗ್ಯದಂತಹ ವಿಷಯಗಳ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ, ಅಂತಹ ಸಂದರ್ಭಗಳಲ್ಲಿ ಈ ರೀತಿಯ ಕ್ರೀಡಾಕೂಟಗಳು ವಿದೈಆರ್ಥಿಗಳ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ ಎಂದರು.
ಕ್ರೀಡಾಕೂಟಗಳಲ್ಲಿ ಭಾಗವಹಿಸುವುದೇ ಸಂತಸದ ವಿಚಾರ ಎಂದು ನೀವು ತಿಳಿದುಕೊಳ್ಳಬೇಕು. ಕ್ರೀಡೆಗಳಲ್ಲಿಯೂ ಭಾಗವಹಿಸಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇದರಿಂದ ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಹಾಗೂ ಹಲವೆ ಸಾಧನೆಗಳನ್ನು ಮಾಡಲು ಸಹಕಾರಿಯಾಗುತ್ತದೆ ಎಂದರು.
ಕ್ರೀಡಾಕೂಟದಲ್ಲಿ ವಿದ್ಯಾವರ್ಧಕ, ಸದ್ವಿದ್ಯ, ಮರಿಮಲ್ಲಪ್ಪ, ಸಂತ ಫಿಲೋಮಿನಾ, ವಿಜಯವಿಠ್ಠಲ ಸೇರಿದಂತೆ ಹಲವು ಕಾಲೇಜಿನ ೩೧ ತಂಡಗಳು ಭಾಗವಹಿಸಿದ್ದವು. ೧೧ ತಂಡ ಕಬ್ಬಡ್ಡಿಗೆ. ೧೧ ತಂಡ ವಾಲೀಬಾಲ್ ಪಂದ್ಯಕ್ಕೆ ಹಾಗೂ ೯ ತಂಡಗಳು ಥ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ಹೆಚ್.ಕೆ.ರಮೇಶ್, ಗೌರವ ಕೋಶಾಧ್ಯಕ್ಷ ಶೈಲಾರಾಮಣ್ಣವರ್, ಪ್ರಾಂಶುಪಾಲ ಸಿದ್ದಯ್ಯ ಮುಂತಾದವರು ಭಾಗವಹಿಸಿದ್ದರು. ಸಂಜೆ ಸಮಾರೋಪ ಸಮಾರಂಭ ನಡೆಯಿತು.





