Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಜಿ- 20 ಅಧ್ಯಕ್ಷತೆಗೆ ಏಕಿಷ್ಟು ಮಹತ್ವ ?

ಮೈಸೂರು: ಜಾಗತಿಕ ಸಂಘಟನೆಗಳಲ್ಲಿ ಅತಿ ಬಲಿಷ್ಠ ಸಂಘಟನೆ ಯಾವುದು ಎಂದು ಕೇಳಿದರೆ ಅದು ನಿಸ್ಸಂಶಯವಾಗಿ ಜಿ. 20 ಒಕ್ಕೂಟ. ವಿಶ್ವ ಆರ್ಥಿಕತೆಯ ಶೇ. 85 ರಷ್ಟು ಪಾಲು ಹೊಂದಿರುವ ಕಾರಣಕ್ಕಾಗಿ ಈ ಸಂಘಟನೆಗೆ ತನ್ನದೇ ಆದ ಮಹತ್ವವಿದೆ. ಈ ಒಕ್ಕೂಟದ ರಾಷ್ಟ್ರಗಳು ಜಗತ್ತಿನ ಜಿಡಿಪಿಯ ಶೇ 80ರಷ್ಟು, ಅಂತರರಾಷ್ಟ್ರೀಯ ವ್ಯಾಪಾರದ ಶೇ 75ರಷ್ಟು ಹಾಗೂ ಒಟ್ಟಾರೆ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗವನ್ನು ಹೊಂದಿವೆ. ಭಾರತ ಈಗ ಈ ಪ್ರತಿಷ್ಠಿತ ಒಕ್ಕೂಟದ ಅಧ್ಯಕ್ಷ. ಮುಂದಿನ ಒಂದು ವರ್ಷಗಳ ಕಾಲ ಈ ಒಕ್ಕೂಟಕ್ಕೆ ಸಂಬಂಧಿಸಿದ 200ಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸಲು ಭಾರತ ಸಿದ್ಧವಾಗಿದೆ. ಮುಂದಿನ ವರ್ಷ ಏಪ್ರಿಲ್‌ 20 ರಂದು ಜಿ – 20 ಶೃಂಗಸಭೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯಲಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿ ಅಂತಾರಾಷ್ಟ್ರೀಯ ಒಕ್ಕೂಟಗಳ ಅಧ್ಯಕ್ಷತೆಯನ್ನು ಇಂಗ್ಲೀಷ್‌ ವರ್ಣಮಾಲೆಯ ಪ್ರಕಾರ ನೀಡುವುದು ಪದ್ಧತಿ. ಇದೇ ರೀತಿ, ಇಂಡೋನೇಷ್ಯಾದ ಬಳಿಕ ಜಿ – 20 ಶೃಂಗಸಭೆಯ ಅಧ್ಯಕ್ಷತೆ ಭಾರತಕ್ಕೆ ಒಲಿದು ಬಂದಿದೆ.

ಜಿ-೨೦ ಒಕ್ಕೂಟದ ಅಧ್ಯಕ್ಷತೆ ದೇಶದ ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ವೇಗ ನೀಡಲಿದೆ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿಶ್ವಾಸ. ಚುನಾವಣಾ ವರ್ಷದಲ್ಲಿ ಇಂತಹ ಮಹತ್ವದ ವೇದಿಕೆಯ ಅಧ್ಯಕ್ಷತೆ ಸಿಕ್ಕಿರುವುದು ಪ್ರಧಾನಿ ಮೋದಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಆದರೆ ಪ್ರತಿಪಕ್ಷಗಳ ಪಾಲಿಗೆ ಈ ಬೆಳವಣಿಗೆ ಖುಷಿಕೊಟ್ಟಿಲ್ಲ.


ರಾಜಕೀಯವನ್ನು ಹೊರತುಪಡಿಸಿ ನೋಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಜಿ.20 ಶೃಂಗ ಅತ್ಯುತ್ತಮ ವೇದಿಕೆಯಾಗಲಿದೆ. ಜಿ.20 ಅಧ್ಯಕ್ಷತೆಯ ನೆನಪಿಗಾಗಿ ಡಿಸೆಂಬರ್‌ ಒಂದರಂದು ಹಂಪಿ ಸೇರಿದಂತೆ ಪಾರಂಪರಿಕ ತಾಣಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಜಿ 20 ಶೃಂಗದ ಸಭೆಗಳ ಜತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುವುದು ಕೇಂದ್ರ ಸರಕಾರದ ಉದ್ದೇಶ.

ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಜಿ-೨೦ ಶೃಂಗ ಸಭೆಯ ೨೦೦ ಸಭೆಗಳನ್ನು ದೇಶಾದ್ಯಂತ ನಡೆಸಲು ಉದ್ದೇಶಿಸಲಾಗಿದೆ. ಕಾಶ್ಮೀರದಲ್ಲೂ ಜಿ-೨೦ ಸಭೆಗಳನ್ನು ಆಯೋಜಿಸಲು ಸರ್ಕಾರ ಪರಿಗಣಿಸುತ್ತಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್‌ ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನ, ಸೆಮಿಕಂಡಕ್ಟರ್ , ೫ಜಿ, ಕೃತಕ ಬುದ್ಧಿಮತ್ತೆ, ವಾಣಿಜ್ಯ ಬಾಹ್ಯಾಕಾಶ ಉಡಾವಣೆಗಳು, ಉಪಗ್ರಹ ತಯಾರಿಕೆ ಸೇರಿದಂತೆ ನಾನಾ ವಿಷಯಗಳ ಕುರಿತು ಚರ್ಚೆಗೆ ಈ ಸಭೆ ನಡೆಯಲಿದೆ.

ಪ್ರವಾಸಿ ನಗರವಾಗಿ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿರುವ ಮೈಸೂರಿನಲ್ಲೂ ಜಿ.20 ಶೃಂಗದ ಒಂದೆರಡು ಸಭೆಗಳನ್ನು ನಡೆಸುವ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇದು ಸಾಧ್ಯವಾದರೆ ಸಾಂಸ್ಕೃತಿಕ ನಗರದಲ್ಲಿ ಮತ್ತೊಮ್ಮೆ ದಸರಾ ಕಳೆ ಮೂಡಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ